ದೇಶದ ಉನ್ನತ ಸ್ಥಾನಗಳಲ್ಲಿರುವ ಮಂದಿ ಮಾಡುವ ಸಣ್ಣ ಪುಟ್ಟ ಎಡವಟ್ಟುಗಳು ದೊಡ್ಡ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹಾಗೂ ಅವರ ಕುಟುಂಬ ಮಾಡಿದ ಸಣ್ಣ ಪ್ರಮಾದವೊಂದು ಸುದ್ದಿಯಾಗಿದೆ.
ಕೇಂದ್ರ ಲಂಡನ್ನ ಹೈಡ್ ಪಾರ್ಕ್ನಲ್ಲಿ ತನ್ನ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿದ್ದ ಸುನಕ್ ಕುಟುಂಬ ಈ ಸಂದರ್ಭದಲ್ಲಿ ನಾಯಿಗೆ ಸರಪಳಿ ಹಾಕದೇ ಇರುವ ಕಾರಣ ಈ ಎಡವಟ್ಟಾಗಿದೆ. ಈ ಉದ್ಯಾನದಲ್ಲಿರುವ ಇತರ ಜೀವಿಗಳಿಗೆ ಶಾಂತಿಯಿಂದ ಇರಲು ಹೀಗೆ ನಾಯಿಗಳಿಗೆ ಸರಪಳಿ ಹಾಕಿಕೊಂಡು ಕರೆದೊಯ್ಯಬೇಕೆಂಬ ನಿಯಮವಿದ್ದು, ಇದೇ ವಿಚಾರವನ್ನು ಪೊಲೀಸರು ಸುನಕ್ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾದ ಕ್ಲಿಪ್ನಲ್ಲಿ ನಾಯಿಯು ಆರಾಮವಾಗಿ ಅಡ್ಡಾಡುತ್ತಿರುವುದನ್ನು ನೋಡಬಹುದಾಗಿದೆ. “ಸುನಕ್ ಮಡದಿ ಅಕ್ಷತಾ ಮೂರ್ತಿಯವರಿಗೆ ಅಲ್ಲಿದ್ದ ಅಧಿಕಾರಿಯೊಬ್ಬರು ತಮ್ಮ ನಾಯಿಗೆ ಸರಪಳಿ ಹಾಕಿಕೊಂಡು ಕರೆದೊಯ್ಯಬೇಕೆಂದು ತಿಳಿಸಿದ್ದಾರೆ. ಕೂಡಲೇ ನಾಯಿಗೆ ಸರಪಳಿ ತೊಡಿಸಲಾಗಿದೆ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಯಾವುದೇ ಸ್ಪಷ್ಟನೆಯನ್ನು ಸುನಕ್ ರ ವಕ್ತಾರರಾಗಲೀ ಅಥವಾ ಡೌನಿಂಗ್ ಸ್ಟ್ರೀಟ್ನಲ್ಲಿರುವ ಅವರ ಅಧಿಕೃತ ನಿವಾಸದ ಮೂಲಗಳಾಗಲೀ ಕೊಟ್ಟಿಲ್ಲ.