ನಾವು ಪ್ರತಿನಿತ್ಯ ಸುತ್ತಲಿನ ಮಂದಿಗೆ ಕೆಲವು ಬಾರಿ ಕ್ಷಮೆ ಇರಲಿ ಎನ್ನುತ್ತಲೇ ಇರುತ್ತೇವೆ. ತಿಳಿದೋ/ತಿಳಿಯದೆಯೋ ಆಗುವ ಸಣ್ಣ ಪುಟ್ಟ ತಪ್ಪುಗಳಿಗೆ ಹೀಗೆ ’ಸಾರಿ’ ಎನ್ನುವ ಮೂಲಕ ಜನರೊಂದಿಗೆ ನಮ್ಮ ಒಡನಾಟದಲ್ಲಿ ಇನ್ನಷ್ಟು ಸೌಜನ್ಯತೆ ತರುವುದು ಇದರಿಂದ ಸಾಧ್ಯವಾಗುತ್ತದೆ.
ಈ ’ಸಾರಿ’ ಪದದ ಮೂಲ ಹುಡುಕುತ್ತಾ ಹೋದಲ್ಲಿ ಹಳೆಯ ಇಂಗ್ಲಿಷ್‌ನ ’ಸಾರಿಗ್’ ಶಬ್ದ ನಮ್ಮೆದುರು ಬರುತ್ತದೆ. ನೊಂದ, ತೊಂದರೆಗೊಳಪಟ್ಟ ಅಥವಾ ಶೋಕತಪ್ತವಾದ ಎಂಬ ಅರ್ಥವನ್ನು ’ಸಾರಿಗ್’ ಕೊಡುತ್ತದೆ. ತಪ್ಪು ಮಾಡಿರುವ ಕಾರಣಕ್ಕೆ ದೇವರಿಗೆ ಮೊರೆ ಹೋಗಿ ತಪ್ಪಾಯಿತು ಎಂದು ಕೇಳಿಕೊಂಡು ತಮ್ಮ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸುವ ಅರ್ಥವನ್ನು ಈ ಪದ ಕೊಡುತ್ತದೆ.
ಹೀಗಾಗಿ ’ಸಾರಿ’ ಶಬ್ದವನ್ನು ಬಳಕೆ ಮಾಡುವ ಮುನ್ನ ತಮ್ಮ ತಪ್ಪಿನ ಅರಿವಾಗಿ ಮತ್ತೆ ಅದೇ ರೀತಿ ಮಾಡುವುದಿಲ್ಲ ಎಂದು ಬದ್ಧರಾಗಿರಬೇಕಾಗುತ್ತದೆ. ನಮ್ಮಿಂದ ನೋವಾದ ವ್ಯಕ್ತಿಗೆ ನಾವು ಅಪಾಲಜಿ ಕೇಳುವುದು ಎಂದರೆ ನಮಗೆ ಆ ರೀತಿ ಮಾಡಿದ್ದಕ್ಕೆ ವಿಷಾದವಿದ್ದು, ಅದೇ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಮಾತು ಕೊಟ್ಟಂತೆ ಆಗುತ್ತದೆ. ಈ ಶಬ್ದವು ಒಂದು ಶಕ್ತಿಶಾಲಿ ಉಪಕರಣವಾಗಿಯೂ ಕೆಲಸ ಮಾಡುತ್ತದೆ. ನಮ್ಮ ವಿನಯವಂತಿಕೆಯು ನಾವು ಬೆಳೆದು ಬಂದ ಹಾದಿ ಹಾಗೂ ಬೆಳೆಸಿಕೊಂಡ ಪ್ರಾಮಾಣಿಕತೆಗಳನ್ನು ಸೂಚಿಸುತ್ತದೆ.
ಇದೇ ವೇಳೆ, ಪದೇ ಪದೇ ಸಾರಿ ಶಬ್ದದ ಬಳಕೆಯಿಂದ ನಮ್ಮ ಆತ್ಮಗೌರವ ಕಡಿಮೆ ಇರುವಂತೆಯೂ, ನಾವು ಬೇರೊಬ್ಬರನ್ನು ಮೆಚ್ಚಿಸುವ ಯತ್ನದಲ್ಲಿರುವಂತೆಯೂ ಭಾಸವಾಗುತ್ತದೆ. ಹಾಗಾಗಿ ಈ ಸಾರಿ ಶಬ್ದವನ್ನು ಬಹಳ ಜತನದಿಂದ ಬಳಸಬೇಕಾಗುತ್ತದೆ.