
ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಮೇಲೆ ಸಹ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಎರಡೂ ಪ್ರಕರಣಗಳಲ್ಲೂ ಆರೋಪಿಗಳು ಸಂಪೂರ್ಣವಾಗಿ ಪಾನಮತ್ತರಾಗಿದ್ದರು.
ಇದೀಗ ಇಂತಹುದೇ ಒಂದು ಘಟನೆ ರೈಲಿನಲ್ಲಿ ನಡೆದಿದ್ದು, ಮಹಿಳಾ ಪ್ರಯಾಣಿಕರೊಬ್ಬರ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿದೆ. ಆಘಾತಕಾರಿ ಸಂಗತಿ ಎಂದರೆ ಸಂಪೂರ್ಣವಾಗಿ ಪಾನಮತ್ತನಾಗಿದ್ದ ರೈಲಿನ ಟಿಟಿಯೇ ಈ ಕೃತ್ಯವೆಸಗಿದ್ದಾನೆ. ಭಾನುವಾರದಂದು ಅಮೃತಸರ ಮತ್ತು ಕೊಲ್ಕತ್ತಾ ನಡುವೆ ಸಂಚರಿಸುವ ಅಖಲ್ ತಕ್ತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಅಮೃತಸರದ ರಾಜೇಶ್ ಎಂಬವರು ತಮ್ಮ ಪತ್ನಿಯ ಜೊತೆಗೆ ರೈಲಿನ ಎ1 ಕೋಚಿನಲ್ಲಿ ಪ್ರಯಾಣ ಮಾಡುತ್ತಿದ್ದು, ಪತ್ನಿ ಮಲಗಿದ್ದ ವೇಳೆ ಮಧ್ಯರಾತ್ರಿ ಬಂದ ಟಿಟಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಎಚ್ಚರಗೊಂಡ ಆಕೆ ಕೂಗಿಕೊಂಡಿದ್ದು, ಪತಿ ಮತ್ತು ಇತರ ಸಹ ಪ್ರಯಾಣಿಕರು ಆತನನ್ನು ಹಿಡಿದಿದ್ದಾರೆ.
ಬಿಹಾರ ಮೂಲದ ಮುನ್ನಾ ಕುಮಾರ್ ಎಂಬ ಟಿಟಿ ನಿಲ್ಲಲೂ ಸಾಧ್ಯವಾಗದಷ್ಟು ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಶೌಚಾಲಯವೆಂದು ಭಾವಿಸಿ ತನ್ನ ಸೀಟಿನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ. ಇದೀಗ ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.