ಸೋಶಿಯಲ್ ಮೀಡಿಯಾದಲ್ಲಿ ತಾವು ಮಾಡಿರೋ ವಿಡಿಯೋ ವೈರಲ್ ಆಗ್ಬೇಕು. ಅದಕ್ಕೆ ಲೈಕ್ಸ್ ಸಿಗಬೇಕು, ಅನ್ನೋ ಹುಚ್ಚಿಗೆ ಯುವಕರು ಮಾಡೋ ಕೆಲಸ ಒಂದೆರಡಲ್ಲ. ಎಷ್ಟೋ ಬಾರಿ ವಿಭಿನ್ನವಾಗಿ ವಿಡಿಯೋ ಮಾಡ್ಬೇಕಂತ ಹೋದವರು, ದುರದೃಷ್ಟವಶಾತ್ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂತಹದ್ದೇ ಘಟನೆಯೊಂದು ಇತ್ತೀಚೆಗೆ ಪುಣೆಯಲ್ಲಿ ನಡೆದಿದೆ.
ಪುಣೆ ಜಿಲ್ಲೆ ಕಾರಂಜ್ ವಿಹಿರೆ ಗ್ರಾಮದ ಭಾಮಾ ಆಸ್ಭೇಡ್ ಅಣೆಕಟ್ಟಿನ ಹಿನ್ನೀರಿನಲ್ಲಿ ಚಕನ್ ವರಾಲೆಯ 32 ವರ್ಷದ ದತ್ತ ಭಾರತಿ ಅನ್ನೊ ಹೆಸರಿನ ವ್ಯಕ್ತಿ, ಮೊಬೈಲ್ನಲ್ಲಿ ವಿಡಿಯೋ ಮಾಡಲು ಹೋಗಿ ಆಯತಪ್ಪಿ ಬಿದ್ದು, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವನ್ಯಜೀವಿ ರಕ್ಷಕರ ತಂಡ ಶವವನ್ನ ಹುಡುಕಿ ತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಪೊಸ್ಟ್ಮಾರ್ಟಂಗೆ ಕಳುಹಿಸಿದ್ದಾರೆ.
ಪೊಲೀಸರು ಕೊಟ್ಟ ಮಾಹಿತಿ ಪ್ರಕಾರ ದತ್ತ ಭಾರತಿ ಇನ್ಸ್ಟಾಗ್ರಾಮ್ ರೀಲ್ಗಾಗಿ ವಿಡಿಯೋ ಮಾಡಲು ಹೋದಾಗ ಈ ಅವಘಡ ಸಂಭವಿಸಿದೆ. ಅಲ್ಲದೇ ರೀಲ್ ಮಾಡುವ ಮುನ್ನ ಈತ ಮದ್ಯಪಾನ ಮಾಡಿದ್ದ ಎಂದು ಕೂಡಾ ಹೇಳಲಾಗಿದೆ.
ಈ ಹಿಂದೆಯೂ ಯುವಕರಿಬರು ಇನ್ಸ್ಟಾಗ್ರಾಂ ರೀಲ್‌ಗಾಗಿ ದ್ವಿಚಕ್ರವಾಹನದಲ್ಲಿ ಬೈಕ್ ಸ್ಟಂಟ್ ಮಾಡಲು ಹೋದಾಗ ಬೈಕ್ ಎದುರಿಗೆ ಬರುತ್ತಿದ್ದ ಮಹಿಳೆಯ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದರು. ಇದರ ಪರಿಣಾಮ ಮಹಿಳೆ ಸಾವನ್ನಪ್ಪಿದ್ದರು. ಭಾರತದಲ್ಲಿ ಇತ್ತೀಚೆಗೆ ಈ ರೀತಿಯ ಘಟನೆಗಳು ಹೆಚ್ಚಾಗಿವೆ. ರೀಲ್ ಮಾಡಿ ಫೇಮಸ್ ಆಗಲು ಹೋದವರು, ಮಸಣಕ್ಕೆ ಹೋಗಿದ್ದೇ ಹೆಚ್ಚು ಅನ್ನೊ ಹಾಗಾಗಿದೆ.