ನವದೆಹಲಿ: ರಾಜ್ಯ ಸಂಸ್ಥೆಗಳ ಬದಲಿಗೆ ಔಷಧಿಗಳ ತಯಾರಿಕೆಯನ್ನು ಕೇಂದ್ರ ಸರ್ಕಾರ ನಿಯಂತ್ರಿಸುವ ಕುರಿತು ಹೊಸ ನಿಯಮ ರೂಪಿಸಲು ಕರಡು ಸಿದ್ಧಪಡಿಸಲಾಗಿದೆ.
ಕರಡು ವಿಧೇಯಕವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಔಷಧ, ವೈದ್ಯಕೀಯ ಉಪಕರಣ, ಸೌಂದರ್ಯವರ್ಧಕಗಳ ತಯಾರಿಕೆ ಕರಡು ವಿಧೇಯಕ 2023 ರೂಪಿಸಲಾಗಿದೆ. ಪರಿಷ್ಕೃತ ಕರಡು ಪ್ರಕಾರ ಇದು ಅಸ್ತಿತ್ವದಲ್ಲಿರುವ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ 1940 ರ ಕಾಯ್ದೆಯನ್ನು ಬದಲಿಸಲಿದೆ. ರಾಜ್ಯಗಳ ಔಷಧ ನಿಯಂತ್ರಕರ ಬದಲಿಗೆ ಕೇಂದ್ರ ಔಷಧೀಯ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ಔಷಧಗಳ ತಯಾರಿಕೆಯ ಅಧಿಕಾರ ನೀಡಲು ಕರಡು ವಿಧೇಯಕದಲ್ಲಿ ತಿಳಿಸಲಾಗಿದೆ.
ಔಷಧ ತಯಾರಿಕೆಯ ಅಧಿಕಾರ ಕೇಂದ್ರ ವ್ಯಾಪ್ತಿಗೆ ಒಳಪಟ್ಟರೂ ಔಷಧ, ಸೌಂದರ್ಯವರ್ಧಕ, ವೈದ್ಯಕೀಯ ಸಾಧನಗಳ ಮಾರಾಟದ ಅಧಿಕಾರ ರಾಜ್ಯಗಳ ವ್ಯಾಪ್ತಿಯಲ್ಲಿ ಇರುತ್ತದೆ ಎಂದು ಹೇಳಲಾಗಿದೆ. ಹೊಸ ಕರಡು ವಿಧೇಯಕದ ಪ್ರಕಾರ, ಇ- ಫಾರ್ಮಸಿ ನಡೆಸಲು ಅನುಮತಿ ಪಡೆಯುವ ನಿಬಂಧನೆ ಕೈ ಬಿಡಲಾಗಿದೆ. ಆನ್ಲೈನ್ ಮೂಲಕ ಯಾವುದೇ ಔಷಧಿಗಳ ಮಾರಾಟ, ಸಂಗ್ರಹಣೆ, ಆಫರ್ ಪ್ರದರ್ಶನ, ವಿತರಣೆಯನ್ನು ಕೇಂದ್ರ ಸರ್ಕಾರ ನಿಯಂತ್ರಿಸಬಹುದಾಗಿದೆ. ಇಲ್ಲವೇ ನಿಷೇಧಿಸಬಹುದಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಜುಲೈನಲ್ಲಿ ಹೊಸ ಕರಡು ವಿಧೇಯಕವನ್ನು ಸಾರ್ವಜನಿಕ ಚರ್ಚೆಗೆ ನೀಡಲಾಗಿದ್ದು, ತಜ್ಞರು ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಕ್ರಿಯೆ ಸ್ವೀಕರಿಸಿ ಪರಿಷ್ಕರಿಸಿ ಸಚಿವಾಲಯದ ಸಮಾಲೋಚನೆಗೆ ಕಳುಹಿಸಲಾಗಿದೆ.
ಕರಡು ಮಸೂದೆಯ ಪ್ರಕಾರ, ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಆನ್‌ಲೈನ್ ಮೋಡ್ ಮೂಲಕ ಯಾವುದೇ ಔಷಧಿಯ ಮಾರಾಟ, ಸಂಗ್ರಹಣೆ, ಪ್ರದರ್ಶನ ಅಥವಾ ಮಾರಾಟ ಅಥವಾ ವಿತರಣೆಯನ್ನು ನಿಯಂತ್ರಿಸಬಹುದು, ನಿರ್ಬಂಧಿಸಬಹುದು ಅಥವಾ ನಿಷೇಧಿಸಬಹುದು ಎನ್ನಲಾಗಿದೆ.