ಆಗ್ರಾ: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ಹರಿಯಾಣದ ಗುರುಗ್ರಾಮ್‌ನಲ್ಲಿರುವ ಮಲ್ಟಿ ನ್ಯಾಷನಲ್ ಕಾರ್ಪೊರೇಷನ್‌ನಲ್ಲಿ ಮಾನವ ಸಂಪನ್ಮೂಲ(ಹೆಚ್‌ಆರ್) ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಚೈನ್ ಸ್ನ್ಯಾಚಿಂಗ್ ಪ್ರಕರಣದಲ್ಲಿ ಬಂಧಿಸಲಾಗಿದೆ.
ಆಗ್ರಾ ಪೊಲೀಸರಿಗೆ ಚೈನ್ ಸ್ನ್ಯಾಚಿಂಗ್ ಕುರಿತು ಹಲವು ದೂರುಗಳು ಬಂದಿದ್ದವು. ಆದರೆ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಪೊಲೀಸರು ಆರೋಪಿ ಅಭಿಷೇಕ್ ಓಜಾನನ್ನು ಬಂಧಿಸಿದ್ದಾರೆ.
ಕೈತುಂಬ ಸಂಬಳದ ಹೊರತಾಗಿಯೂ, ಅಭಿಷೇಕ್ ಅದ್ದೂರಿ ಜೀವನಶೈಲಿಗಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಆರಂಭದಲ್ಲಿ, ಓಜಾ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲದ ಕಾರಣ ಆರೋಪಿಯನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಬಂಧನದ ನಂತರ, ಓಜಾ ತನ್ನ ಶ್ರೀಮಂತ ಜೀವನಶೈಲಿಯನ್ನು ಪೂರೈಸಲು ತನ್ನ ಅಪರಾಧ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದಾನೆ.
ವರ್ಕ್ ಫ್ರಂ ಹೋಂ ಮೂಲಕ ಕೆಲಸ ಮಾಡುತ್ತಿದ್ದ ಓಜಾ ಮೋಟಾರ್ ಬೈಕ್ ನಲ್ಲಿ ತಿರುಗಾಡಲು ಹೋಗುತ್ತಿದ್ದ ವೇಳೆ ಸರ ದೋಚಿ ಪರಾರಿಯಾಗುತ್ತಿದ್ದ. ಲೂಟಿ ಮಾಡಿದ ಚಿನ್ನವನ್ನು ಸೋನು ವರ್ಮಾ ಎಂಬ ಆಭರಣ ವ್ಯಾಪಾರಿಗೆ ಮಾರಾಟ ಮಾಡಿದ್ದಾನೆ. ಸರ ದೋಚುವಾಗ ಮಹಿಳೆಯರನ್ನು ಹೆದರಿಸಲು ಅವರು ಬಂದೂಕನ್ನು ಬಳಸಿದ್ದ. ತಾನು ಉತ್ತಮ ಕುಟುಂಬದಿಂದ ಬಂದವನು ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ.
ಓಜಾ ಬಳಿಯಿದ್ದ ಬೈಕ್, ಲೂಟಿ ಮಾಡಿದ ಚಿನ್ನದ ಸರ ಮತ್ತು ಜೀವಂತ ಕಾಟ್ರಿಡ್ಜ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯೂ ಆಗ್ರಾ ಪೊಲೀಸ್ ಠಾಣೆಯಲ್ಲಿ ಓಜಾ ವಿರುದ್ಧ ಪ್ರಕರಣ ದಾಖಲಾಗಿದೆ. ವಿವಿಧ ಲೂಟಿ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.