ಪ್ರಸ್ತುತ ಯುಗದಲ್ಲಿ ಮೂತ್ರಪಿಂಡದ ಕಾಯಿಲೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ನಮ್ಮ ಮೂತ್ರಪಿಂಡಗಳು ಹಾನಿಗೊಳಗಾದರೆ, ದೇಹದ ಫಿಲ್ಟರಿಂಗ್ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವಿಷವು ಹೊರಬರಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅನೇಕ ಇತರ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ಮೂತ್ರಪಿಂಡದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಕಿಡ್ನಿ ಸಮಸ್ಯೆ ಕೆಲವೊಮ್ಮೆ ಪ್ರಾಣಕ್ಕೇ ಕುತ್ತು ತರಬಹುದು. ಕೆಲವೊಂದು ದುರಭ್ಯಾಸಗಳು ಕೂಡ ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತವೆ. ಅವು ಯಾವುವು ಅನ್ನೋದನ್ನು ನೋಡೋಣ.
ಧೂಮಪಾನ– ಸಿಗರೇಟ್, ಹುಕ್ಕಾ, ಬೀಡಿ ಮತ್ತು ಗಾಂಜಾ ಸೇವನೆಯು ದೇಹದ ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದು ಮೂತ್ರಪಿಂಡದ ಮೇಲೆ ಒತ್ತಡವನ್ನು ಉಂಟುಮಾಡುವ ಕಾರಣ ನಮ್ಮ ಕಿಡ್ನಿಗೆ ವಿಪರೀತ ಹಾನಿ ಮಾಡುತ್ತದೆ. ಧೂಮಪಾನ ಮಾಡುವುದರಿಂದ ರಕ್ತನಾಳಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದು ರಕ್ತದ ಪರಿಚಲನೆಗೆ ಅಡ್ಡಿ ಮಾಡುತ್ತದೆ. ಅಂತಿಮವಾಗಿ ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ.
ಅನಾರೋಗ್ಯಕರ ಆಹಾರ- ಮೂತ್ರಪಿಂಡದ ಮೇಲೆ ನಾವು ಸೇವಿಸುವ ಆಹಾರ ಕೂಡ ಪರಿಣಾಮ ಬೀರಬಲ್ಲದು. ಆದ್ದರಿಂದ ಮೂತ್ರಪಿಂಡಗಳಿಗೆ ಪ್ರಯೋಜನಕಾರಿಯಾದ ಆಹಾರವನ್ನು ಆರಿಸಿಕೊಳ್ಳಿ. ಅನಾರೋಗ್ಯಕರ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ಕಿಡ್ನಿಗೆ ಹಾನಿಯಾಗುತ್ತದೆ. ಸಂಸ್ಕರಿಸಿದ ಆಹಾರ ಮತ್ತು ಸೋಡಿಯಂ ಭರಿತ ತಿನಿಸುಗಳಿಂದ ದೂರವಿದ್ದರೆ ಕಿಡ್ನಿಗಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.
ಸೋಮಾರಿತನ– ನೀವು ಸೋಮಾರಿಯಾಗಿದ್ದರೆ ಖಂಡಿತವಾಗಿಯೂ ನಿಮ್ಮ ಕಿಡ್ನಿಗಳಿಗೆ ಹಾನಿಯಾಗುತ್ತದೆ. ಪ್ರತಿದಿನ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡಿದರೆ ಮೂತ್ರಪಿಂಡಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ತೂಕ ವಿಪರೀತ ಹೆಚ್ಚಾದರೆ ರಕ್ತದೊತ್ತಡದಿಂದಾಗಿ ಕಿಡ್ನಿಗಳಿಗೂ ಹಾನಿಯಾಗುತ್ತದೆ.
ಸಾಕಷ್ಟು ನೀರು ಕುಡಿಯಿರಿ–ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ನೀರು ಕುಡಿಯುವುದು ಬಹಳ ಮುಖ್ಯ, ಆಗ ಮಾತ್ರ ಫಿಲ್ಟರಿಂಗ್ ಪ್ರಕ್ರಿಯೆಯು ಸರಿಯಾಗಿ ನಡೆಯುತ್ತದೆ. ನಿರ್ಜಲೀಕರಣವು ಮೂತ್ರಪಿಂಡಕ್ಕೆ ತೀವ್ರ ತೊಂದರೆ ಉಂಟುಮಾಡಬಹುದು. ಹೆಚ್ಚಿನ ಆರೋಗ್ಯ ತಜ್ಞರು ದಿನಕ್ಕೆ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ.