ತಮ್ಮ ಮರಣಾನಂತರ ತಮ್ಮ ಮೂವರು ಹೆಣ್ಣುಮಕ್ಕಳಿಗೆ ತಮ್ಮ ಆಸ್ತಿ ಸೇರಲೆಂದು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾರ್ಚ್ 8 ರ ಅಂತರಾಷ್ಟ್ರೀಯ ಮಹಿಳಾ ದಿನದಂದು ದಂಪತಿ 29 ವರ್ಷದ ನಂತರ ಮತ್ತೊಮ್ಮೆ ಮದುವೆಯಾಗಿದ್ದಾರೆ.
ಕುಂಚಾಕೊ ಬೋಬನ್ ಅಭಿನಯದ ಎನ್ನ ತಾನ್ ಕೇಸ್ ಕೊಡು (ಸ್ಯೂ ಮಿ ತೆನ್) ಚಿತ್ರದಲ್ಲಿ ವಕೀಲರಾಗಿ ಹೆಸರುವಾಸಿಯಾದ ಖ್ಯಾತ ವಕೀಲ ಮತ್ತು ನಟ ಸಿ ಶುಕ್ಕೂರ್ ಮತ್ತು ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಪ್ರೊ-ವೈಸ್ ಚಾನ್ಸೆಲರ್ ಡಾ ಶೀನಾ ಬುಧವಾರ ಮರು ವಿವಾಹವಾದರು.
ಅವರು ಮೊದಲು ಅಕ್ಟೋಬರ್ 1994 ರಲ್ಲಿ ವಿವಾಹವಾಗಿದ್ದರು. ಆಗ ಅವರ ವಿವಾಹವನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಾಣಕ್ಕಾಡ್ ಸೈಯದ್ ಹೈದರ್ ಅಲಿ ಶಿಹಾಬ್ ತಂಗಲ್ ಅವರು ನಡೆಸಿದ್ದರು.
ಇದೀಗ ಸಿ ಶುಕ್ಕೂರ್ ಮತ್ತು ಡಾ ಶೀನಾ ಅವರು ಮುಸ್ಲಿಂ ಉತ್ತರಾಧಿಕಾರ ಕಾನೂನುಗಳಲ್ಲಿ ವಿಧಿಸಲಾದ ಕೆಲವು ಷರತ್ತುಗಳಿಂದ ತಮ್ಮ ವಿವಾಹವನ್ನು ಮರು-ನೋಂದಣಿ ಮಾಡಲು ವಿಶೇಷ ಮಾರ್ಗವನ್ನು ತೆಗೆದುಕೊಂಡರು.
ಅವರ ಮೊದಲ ಮದುವೆಯನ್ನು ಷರಿಯಾ ಕಾನೂನಿನಡಿಯಲ್ಲಿ ನಡೆಸಲಾಗಿರುವುದರಿಂದ, ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಅವರ ಹೆಣ್ಣುಮಕ್ಕಳು ತಮ್ಮ ತಂದೆಯ ಆಸ್ತಿಯ ಮೂರನೇ ಎರಡರಷ್ಟು ಪಾಲು ಮಾತ್ರ ಪಡೆಯುತ್ತಿದ್ದರು. ಉಳಿದದ್ದು ದಂಪತಿಗೆ ಗಂಡುಮಕ್ಕಳಿಲ್ಲದಿದ್ದರೆ ಅದು ಅವರ ಸಹೋದರರಿಗೆ ಹೋಗುತ್ತಿತ್ತು.
ದಂಪತಿಗಳು ತಮ್ಮ ಆಸ್ತಿ ತಮ್ಮ ಮಕ್ಕಳಿಗೆ ಹೋಗುವುದನ್ನು ಖಚಿತಪಡಿಸಿಕೊಳ್ಳಲು, ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಮತ್ತೊಮ್ಮೆ ವಿವಾಹವಾದರು. ಅದರ ಅಡಿಯಲ್ಲಿ ಯಾವುದೇ ವ್ಯಕ್ತಿಯ ಆಸ್ತಿಯ ಉತ್ತರಾಧಿಕಾರವು ಭಾರತೀಯ ಉತ್ತರಾಧಿಕಾರ ಕಾಯಿದೆಯಿಂದ ನಿಯಂತ್ರಿಸಲ್ಪಡುತ್ತದೆ ಎಂದು ಹೇಳುತ್ತದೆ.