ಕೇಂದ್ರ ಫ್ಲೋರಿಡಾ ಸರೋವರದ ಮೇಲೆ ಎರಡು ಸಣ್ಣ ವಿಮಾನಗಳು ಹಾರಾಟ ನಡೆಸುತ್ತಿರುವಾಗ ಪರಸ್ಪರ ಡಿಕ್ಕಿ ಹೊಡೆದು ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಕರ್ತರು ಸಂಭವನೀಯ ಬದುಕುಳಿದವರಿಗಾಗಿ ವಿಂಟರ್ ಹೆವನ್‌ನಲ್ಲಿರುವ ಲೇಕ್ ಹಾರ್ಟ್ರಿಡ್ಜ್ ನಲ್ಲಿ ಹುಡುಕಾಟ ಮುಂದುವರೆಸಿದ್ದಾರೆ ಎಂದು ಪೋಲ್ಕ್ ಕೌಂಟಿ ಶೆರಿಫ್ ಕಚೇರಿಯ ಮುಖ್ಯಸ್ಥ ಸ್ಟೀವ್ ಲೆಸ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಕ್ಷಕರು ಸಿಪಿಆರ್ ಮಾಡಲು ಪ್ರಯತ್ನಿಸಿದ ನಂತರ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದ್ದಾರೆ.
ವಿಂಟರ್ ಹೆವನ್ ಒರ್ಲ್ಯಾಂಡೊದಿಂದ ನೈಋತ್ಯಕ್ಕೆ 65 ಕಿಲೋಮೀಟರ್ ದೂರದಲ್ಲಿದೆ. ದುರಂತಕ್ಕೀಡಾದ ವಿಮಾನಗಳಲ್ಲಿ ಒಂದನ್ನು ಪೈಪರ್ J-3 ಫ್ಲೋಟ್‌ಪ್ಲೇನ್ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಗುರುತಿಸಿದೆ. ವಿಮಾನ ಅವಶೇಷಗಳ ದೃಶ್ಯಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ.
ವಿಮಾನಗಳಲ್ಲಿ ಎಷ್ಟು ಜನರಿದ್ದರು, ಅವರು ಎಲ್ಲಿ ಟೇಕಾಫ್ ಆಗಿದ್ದರು ಅಥವಾ ಅಪಘಾತಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದಿಲ್ಲ ಎಂದು ಪ್ರತಿನಿಧಿಗಳು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ವಿಮಾನಗಳು ಒಂದಕ್ಕೊಂದು ಅಪ್ಪಳಿಸಿ ನಂತರ ತಕ್ಷಣವೇ ನೀರಿನಲ್ಲಿ ಬಿದ್ದಿವೆ.
ಎಫ್‌ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ತನಿಖೆ ನಡೆಸಲಿದೆ ಎಂದು ಲೆಸ್ಟರ್ ಹೇಳಿದರು.