ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ತುರ್ತು ವಿಚಾರಣೆಗೆ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಜೆಐ ಮತ್ತು ಕರ್ನಾಟಕ ಸಿಜೆಗೆ ಪತ್ರ ಬರೆಯಲಾಗಿದೆ.
ವಕೀಲರು ಕೇಸ್ ಪೋಸ್ಟ್ ಮಾಡಿಸಲು ವಾರಗಟ್ಟಲೆ ಹೆಣಗಾಡುತ್ತಾರೆ. ಆದರೆ, ಶಾಸಕರ ಅರ್ಜಿ ಒಂದೇ ದಿನದಲ್ಲಿ ವಿಚಾರಣೆಗೆ ತೆಗೆದುಕೊಳ್ಳಲಾಗಿದೆ. ಇದೇ ಮಾನದಂಡವನ್ನು ಎಲ್ಲಾ ನಿರೀಕ್ಷಣಾ ಜಾಮೀನುಗಳಲ್ಲಿಯೂ ಅನುಸರಿಸಬೇಕು. ಜನಸಾಮಾನ್ಯರಿಗೊಂದು ನ್ಯಾಯ, ವಿಐಪಿಗಳಿಗೊಂದು ಪ್ರಕ್ರಿಯೆ ಸರಿಯಲ್ಲ ಎಂದು ಬೆಂಗಳೂರು ವಕೀಲರ ಸಂಘದಿಂದ ಪತ್ರ ಬರೆಯಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರಿಗೆ ಬೆಂಗಳೂರು ವಕೀಲರ ಸಂಘದಿಂದ ಪತ್ರ ಬರೆಯಲಾಗಿದೆ. ಒಂದೇ ದಿನದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಕ್ರಮಕ್ಕೆ ವಕೀಲರ ಸಂಘ ಆಘಾತ ವ್ಯಕ್ತಪಡಿಸಿದೆ.
ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ ಮತ್ತು ಖಜಾಂಚಿ ಎಂ.ಟಿ. ಹರೀಶ್ ಅವರು ಉನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ಹೈಕೋರ್ಟ್ ನಲ್ಲಿ ಹೊಸ ಪ್ರಕರಣಗಳು ಅದರಲ್ಲಿಯೂ ನಿರೀಕ್ಷಣಾ ಜಾಮೀನು ಕೋರಿಕೆಗೆ ಸಂಬಂಧಿಸಿದ ಅರ್ಜಿಗಳು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲು ವಾರಗಟ್ಟಲೆ ಸಮಯ ಬೇಕಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ, ಅತಿ ಗಣ್ಯ ವ್ಯಕ್ತಿಗಳ ಪ್ರಕರಣಗಳನ್ನು ದಿನ ಬೆಳಗಾಗುವುದರೊಳಗೆ ಪರಿಗಣಿಸಲಾಗುತ್ತಿದೆ. ಇಂತಹ ಪದ್ಧತಿ ಶ್ರೀಸಾಮಾನ್ಯರು ನ್ಯಾಯಾಂಗದ ಮೇಲೆ ಹೊಂದಿರುವ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಲಾಗಿದೆ.