ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಲೋಕಾಯುಕ್ತದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಮುಜುಗರದಿಂದ ಪಾರಾಗಲು ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಇದೆ. ಲೋಕಾಯುಕ್ತ ಪೊಲೀಸರು ಕೂಡ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ಇನ್ನೂ ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಹಿನ್ನಲೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪದಂತೆ ನೋಡಿಕೊಳ್ಳಲು ಮಾಡಾಳ್ ವಿರೂಪಾಕ್ಷಪ್ಪ ಪ್ಲಾನ್ ಮಾಡಿಕೊಂಡಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಬಿಜೆಪಿ ಟಿಕೆಟ್ ಪಡೆದುಕೊಳ್ಳಲು ಲಾಬಿ ನಡೆಸಿದ್ದಾರೆ. ಹಿರಿಯ ಪುತ್ರ ಮಾಡಾಳು ಮಲ್ಲಿಕಾರ್ಜುನ ಅವರಿಗೆ ಬಿಜೆಪಿ ಟಿಕೆಟ್ ಪಡೆದುಕೊಳ್ಳಲು ಪ್ಲಾನ್ ಮಾಡಿಕೊಂಡಿರುವ ಮಾಡಾಳ್ ವಿರೂಪಾಕ್ಷಪ್ಪ ಇಂದು ಚನ್ನಗಿರಿಯಲ್ಲಿ ಬೆಂಬಲಿಗರ ಮೂಲಕ ಸಭೆ ನಡೆಸಿ ಒತ್ತಡ ಹೇರಲು ಮುಂದಾಗಿದ್ದಾರೆ.
ಪುತ್ರ ಪ್ರಶಾಂತ್ ನನ್ನು ಜೈಲಿನಿಂದ ಹೊರ ತರುವುದಕ್ಕೂ ಕೂಡ ಕಸರತ್ತು ನಡೆಸಿದ್ದಾರೆ. ಪುತ್ರನ ಮನೆಯಲ್ಲಿ ಸುಮಾರು 8 ಕೋಟಿ ರೂಪಾಯಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರಶಾಂತ್ ನನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರು ಕೋರ್ಟ್ ಗೆ ಮನವಿ ಮಾಡಲಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ವಿರೂಪಾಕ್ಷಪ್ಪ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಅವರ ಪರವಾಗಿ ವಕೀಲರು ಮಮನವಿ ಮಾಡಿದ್ದು, ನ್ಯಾಯಮೂರ್ತಿ ಕೆ. ನಟರಾಜನ್ ಅವರು ಇಂದಿಗೆ ಜಾಮೀನು ಅರ್ಜಿ ವಿಚಾರಣೆ ನಿಗದಿ ಮಾಡಿದ್ದಾರೆ.