ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಕಲಚೇತನರಿಗೆ ಅಂಚೆ ಮತದಾನ ಸೌಲಭ್ಯ ಕಲ್ಪಿಸಲು ಚುನಾವಣಾ ಆಯೋಗ ಮುಂದಾಗಿದೆ.
ವಿನೂತನ ಪ್ರಯೋಗಕ್ಕೆ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ, ಈ ಬಾರಿ ಮತದಾನದಿಂದ ಯಾರೂ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಮತಗಟ್ಟೆಗೆ ಬರಲು ಸಾಧ್ಯವಾಗದ ವಿಕಲಚೇತನರು, ಹಿರಿಯ ನಾಗರಿಕರಿಗೆ ಅಂಚೆ ಮತದಾನ ಸೌಲಭ್ಯ ಕಲ್ಪಿಸಲು ಪರಿಶೀಲನೆ ನಡೆಸಿದೆ.
ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ ಸುಮಾರು 18.20 ಲಕ್ಷ ಮತದಾರರು, 5.09 ಲಕ್ಷ ವಿಕಲಚೇತನ ಮತದಾರರಿದ್ದು, ಇವರಿಗೆ ಅಂಚೆ ಮತದಾನ ಸೌಲಭ್ಯ ಕಲ್ಪಿಸಲು ಚುನಾವಣಾ ಆಯೋಗ ಮುಂದಾಗಿದೆ. ಪ್ರಸ್ತುತ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ, ಭದ್ರತಾ ಪಡೆಗಳು ಮತ್ತು ಸೈನಿಕರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಇದನ್ನು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.