ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಸಾವಿರ ಬಿಪಿಎಲ್ ಕಾರ್ಡ್ ದಾರರಿಗೆ ಅಡುಗೆ ಅನಿಲ ಸಿಲಿಂಡರ್ ಅನ್ನು ತಮ್ಮ ಹಣದಿಂದಲೇ ಬದುಕಿರುವವರೆಗೆ ಕೊಡಿಸುವುದಾಗಿ ಕೆಜಿಎಫ್ ಬಾಬು(ಯೂಸುಫ್ ಶರೀಫ್) ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದಿಂದ ಬಡವರು ತತ್ತರಿಸಿದ್ದು, ಹೀಗಾಗಿ ತಮ್ಮ ಹಣದಿಂದಲೇ ಗ್ಯಾಸ್ ಸಿಲಿಂಡರ್ ಕೊಡಿಸುವುದಾಗಿ ತಿಳಿಸಿದ್ದಾರೆ. ಪ್ರತಿ ತಿಂಗಳಿಗೆ ಒಂದು ಸಿಲಿಂಡರಿಗೆ 1105 ರೂ. ಕೊಡಬೇಕಿದ್ದು, ಚೆಕ್ ಮೂಲಕ ನಾನೇ ಹಣವನ್ನು ಬಡವರಿಗೆ ಕೊಡುತ್ತೇನೆ. ಇದರಿಂದ ಅವರು ತಿಂಗಳು ಪೂರ್ತಿ ಅಡುಗೆ ಮಾಡಿಕೊಂಡು ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಕುಟುಂಬಕ್ಕೆ ದೇವರು ಸಾಕಷ್ಟು ಆಸ್ತಿ ನೀಡಿದ್ದು, ನನ್ನ ತಾಯಿ ಬಡವರಿಗೆ ಸಹಾಯ ಮಾಡುವುದನ್ನು ಕಲಿಸಿದ್ದಾರೆ. ಅರ್ಹ ಬಡವರಿಗೆ ಹಣವನ್ನು ಮೀಸಲಿಡುತ್ತೇನೆ ಎಂದು ಹೇಳಿದ ಅವರು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಡ ಜನರಿಗೆ 3000 ಮನೆಗಳನ್ನು ಕಟ್ಟಿಸಿಕೊಡಲು ತೀರ್ಮಾನಿಸಿದ್ದು, 400 ಮನೆಗಳ ಕಾಮಗಾರಿ ಆರಂಭವಾಗಿದೆ ಎಂದು ಹೇಳಿದ್ದಾರೆ.
ಒಂದರಿಂದ ಹತ್ತನೇ ತರಗತಿ ಓದುವ ಗರಿಷ್ಠ 5 ಮಕ್ಕಳಿಗೆ ತಲಾ ಎರಡು ಸಾವಿರ ರೂಪಾಯಿ ಮತ್ತು ಪ್ರಥಮ ಪಿಯುಸಿಯಿಂದ ಪದವಿ ಓದುತ್ತಿರುವ ಒಂದು ಕುಟುಂಬದ ಗರಿಷ್ಠ ನಾಲ್ಕು ವಿದ್ಯಾರ್ಥಿಗಳಿಗೆ ಮಾಸಿಕ 5000 ರೂ. ನೀಡುತ್ತಿರುವುದಾಗಿ ಹೇಳಿದ್ದಾರೆ.