ತೂಕ ಕಡಿಮೆ ಮಾಡಿಕೊಳ್ಳಬೇಕಂದ್ರೆ ಕಟ್ಟುನಿಟ್ಟಾದ ಆಹಾರ ಪದ್ಧತಿ ಅನುಸರಿಸಬೇಕು. ಜಂಕ್ ಫುಡ್, ಕರಿದ ತಿನಿಸುಗಳು, ಸಿಹಿ ತಿಂಡಿಗಳಿಂದ ದೂರವಿರಬೇಕು. ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರವನ್ನು ತಪ್ಪಿಸಿ ಎಂದು ತಜ್ಞರು ಸಲಹೆ ನೀಡ್ತಾರೆ. ಆದ್ರೆ ಪ್ರತಿದಿನ ಜಂಕ್ ಫುಡ್ ಸೇವನೆ ಮಾಡುತ್ತಲೇ ಇಲ್ಲೊಬ್ಬರು ತೂಕ ಇಳಿಸಿದ್ದಾರೆ. ಪ್ರತಿದಿನ ಪಿಜ್ಜಾ ತಿಂದರೂ ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಫಿಟ್‌ನೆಸ್ ತರಬೇತುದಾರ ಮತ್ತು ಪೌಷ್ಟಿಕ ತಜ್ಞ ರಿಯಾನ್ ಮರ್ಸರ್‌ಗೆ ಪಿಜ್ಜಾ ಫೇವರಿಟ್. ಅದನ್ನವರು ಬಿಡಲೇ ಇಲ್ಲ, ಆದರೂ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕರಗಿಸುವಲ್ಲಿ ಮರ್ಸರ್ ಯಶಸ್ವಿಯಾಗಿದ್ದಾರೆ. ಪಿಜ್ಜಾ ತಿನ್ನುತ್ತಲೇ ತೂಕ ಇಳಿಸಿಕೊಂಡಿರೋ ರಿಯಾನ್ ಮರ್ಸರ್‌ಗೆ ಈಗ 34 ವರ್ಷ. ಈತ ಐರ್ಲೆಂಡ್ ನಿವಾಸಿ. ಒಂದು ತಿಂಗಳ ಕಾಲ ದಿನಕ್ಕೆ 3 ಬಾರಿ ಪಿಜ್ಜಾ ತಿಂದು ತೂಕ ಇಳಿಸಿಕೊಂಡಿದ್ದಾಗಿ ರಿಯಾನ್ ಹೇಳಿಕೊಂಡಿದ್ದಾರೆ.
ರಿಯಾನ್ ಒಂದು ತಿಂಗಳು ನಿಯಮಿತವಾಗಿ ಪಿಜ್ಜಾ ಸೇವನೆ ಮಾಡಿದ್ದಾರಂತೆ. ಆದರೂ 3.4 ಕೆಜಿ ತೂಕ ಕಳೆದುಕೊಂಡಿರೋದು ಅಚ್ಚರಿ ಮೂಡಿಸಿದೆ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಈತ ಪಿಜ್ಜಾ ತಿನ್ನುತ್ತಿದ್ದರು. ಈ ಆಹಾರಗಳಿಗೆ ಪ್ರತಿಯೊಬ್ಬರ ದೇಹವು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ ಎಂಬುದು ಅವರ ಅಭಿಪ್ರಾಯ. ಹಾಗಾಗಿ ತೂಕ ಇಳಿಸುವ ಪ್ರಯತ್ನದಲ್ಲಿರುವವರು ಇದೇ ರೀತಿ ಪಿಜ್ಜಾ ಸೇವಿಸುವುದು ಸೂಕ್ತವಲ್ಲ.
ಸಾಮಾನ್ಯವಾಗಿ ಜನರು ಚಳಿಗಾಲದಲ್ಲಿ ಫಿಟ್‌ನೆಸ್ ಸವಾಲುಗಳನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಶೀತದಿಂದಾಗಿ ಚಳಿಗಾಲದಲ್ಲಿ ದೇಹದ ಚಟುವಟಿಕೆಗಳು ಕಡಿಮೆಯಾಗುತ್ತವೆ, ಇದರಿಂದ ತೂಕವನ್ನು ಕಳೆದುಕೊಳ್ಳಲು ಕಷ್ಟವಾಗುತ್ತದೆ. ಆದರೆ ರಿಯಾನ್ ಮರ್ಸರ್ ಕಠಿಣ ಮಾರ್ಗವನ್ನು ಆರಿಸಿಕೊಂಡರು. ಜನವರಿಯಲ್ಲಿ ತೂಕವನ್ನು ಕಡಿಮೆ ಮಾಡಲು ಪ್ರಾರಂಭಿಸಿದರು.
ರಿಯಾನ್ ಮರ್ಸರ್ ಹೊರಗಿನಿಂದ ಪಿಜ್ಜಾವನ್ನು ಆರ್ಡರ್ ಮಾಡಲಿಲ್ಲ. ಅದನ್ನು ಮನೆಯಲ್ಲಿಯೇ ತಯಾರಿಸಿಕೊಂಡು ತಿಂದಿದ್ದಾರೆ. ಜೊತೆಗೆ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿದ್ದಾರೆ. ಈತ ಪ್ರತಿದಿನ 140 ಗ್ರಾಂ ಪ್ರೋಟೀನ್ ತೆಗೆದುಕೊಳ್ಳುತ್ತಿದ್ದರು. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸಹ ತಿನ್ನುವ ಮೂಲಕ ತೂಕ ಇಳಿಸಿದ್ದಾರೆ.