ದೇವಸ್ಥಾನದ ಉತ್ಸವದಲ್ಲಿ ಕೆಂಡ ಹಾಯುವ ಆಚರಣೆಯ ಸಂದರ್ಭದಲ್ಲಿ ಬೆಂಕಿಗೆ ಬಿದ್ದು ಓರ್ವ ವ್ಯಕ್ತಿ ಗಾಯಗೊಂಡಿರೋ ಘಟನೆ ತಮಿಳುನಾಡಿನ ಸಂಗಗಿರಿಯಲ್ಲಿ ನಡೆದಿದೆ.
ಈ ಆಘಾತಕಾರಿ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ, ಫೆಬ್ರವರಿ 17 ರಂದು ಪ್ರಾರಂಭವಾದ ಅರಸಿರಾಮಣಿ ಕುಲ್ಲಂಪಟ್ಟಿಯ ಭದ್ರಕಾಳಿ ಅಮ್ಮ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಈ ದೇಗುಲದಲ್ಲಿ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಅನೇಕ ರೂಪಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಅದರಲ್ಲಿ ಬರಿಗಾಲಿನಲ್ಲಿ ಕೆಂಡದ ಮೇಲೆ ನಡೆಯುವುದು ಸಹ ಸೇರಿದೆ.
ಶುಕ್ರವಾರದಂದು ದೇವಸ್ಥಾನದ ಅರ್ಚಕರು ‘ಪುಂಕರಾಗಮ್’ ಎಂಬ ಎರಡು ಮಡಕೆಗಳನ್ನು ಹೊತ್ತುಕೊಂಡು ಕೆಂಡದ ಮೇಲೆ ಹೋಗುವುದರೊಂದಿಗೆ ಕೊಂಡಹಾಯುವ ಕಾರ್ಯ ಪ್ರಾರಂಭವಾಯಿತು. ನಂತರ, ಭಕ್ತರು ಒಬ್ಬರ ನಂತರ ಒಬ್ಬರು ಅದರ ಮೇಲೆ ನಡೆಯಲು ಪ್ರಾರಂಭಿಸಿದರು. ಈ ವೇಳೆ ಓರ್ವ ಭಕ್ತ ತನ್ನ ಸಮತೋಲನವನ್ನು ಕಳೆದುಕೊಂಡು ಕೆಂಡದ ಮೇಲೆ ಬಿದ್ದನು.
ಎದ್ದೇಳಲು ಸಾಧ್ಯವಾಗದ ಕಾರಣ ಇತರ ಭಕ್ತರು ಅವರನ್ನು ಗುಂಡಿಯಿಂದ ಹೊರತೆಗೆದು ದೇಹಕ್ಕೆ ನೀರು ಸುರಿದರು. ನಂತರ ಚಿಕಿತ್ಸೆಗಾಗಿ ಎಡಪಾಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.