ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ ಸುಮಾರು 30 ಸದಸ್ಯರು ಕೇರಳದ ಕೊಚ್ಚಿಯ ಏಷ್ಯಾನೆಟ್ ಟಿವಿ ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಭದ್ರತಾ ಸಿಬ್ಬಂದಿಯನ್ನು ತಳ್ಳಿ ಸುದ್ದಿ ಕೊಠಡಿಗೆ ಅತಿಕ್ರಮ ಪ್ರವೇಶ ಮಾಡಿದರೆಂದು ತಿಳಿದುಬಂದಿದೆ.
ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ನೌಕರರು ತಮ್ಮ ನೀತಿಯನ್ನು ಸರಿಪಡಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಕಚೇರಿಯೊಳಗೆ ತಮ್ಮ ಬ್ಯಾನರ್ ಕೂಡ ಹಾಕಿದ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಎಸ್‌ಎಫ್‌ಐ ಕಾರ್ಯಕರ್ತರು ಬಹಳ ದಿನದಿಂದ ಜನನಿಬಿಡ ಭಾಗದಲ್ಲಿರುವ ಏಷ್ಯಾನೆಟ್ ಕಚೇರಿ ಬಳಿ ಮೊಕ್ಕಾಂ ಹೂಡಿದ್ದರು. ಆದರೆ ಅವರನ್ನು ಅಲ್ಲಿಂದ ಕಳಿಸಲು ಪೊಲೀಸರು ಯಾವುದೇ ಪ್ರಯತ್ನಗಳನ್ನು ಮಾಡಿರಲಿಲ್ಲ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್, ಇದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ದುರಹಂಕಾರವನ್ನು ಬಿಂಬಿಸುತ್ತದೆ ಎಂದು ಆರೋಪಿಸಿದರು.
“ವಿಜಯನ್ ಮತ್ತು ಅವರ ಸರ್ಕಾರದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಿದ್ದಂತೆ ಸಮಾಜ ವಿರೋಧಿಗಳು ಮೆರೆಯುತ್ತಾರೆ. ಈ ಹೀನ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಮಾಧ್ಯಮಗಳಿಗೆ ತಮ್ಮ ಕೆಲಸವನ್ನು ಮಾಡುವ ಹಕ್ಕಿದೆ ಮತ್ತು ಅವರು ಸರ್ಕಾರವನ್ನು ಮಾತ್ರವಲ್ಲದೆ ಪ್ರತಿಪಕ್ಷವನ್ನೂ ಟೀಕಿಸುತ್ತಾರೆ. ಇದು ವಿಜಯನ್ ಅವರ ಸಂಪೂರ್ಣ ಅಸಹಿಷ್ಣುತೆಯಾಗಿದೆ’’ ಎಂದು ಸತೀಶನ್ ಹೇಳಿದ್ದಾರೆ.
ಏಷ್ಯಾನೆಟ್ ಟಿವಿಯ ಪ್ರಮುಖ ಸುದ್ದಿ ನಿರೂಪಕ ವಿನು ವಿ. ಜಾನ್ ಕಳೆದ ತಿಂಗಳು ಸಿಪಿಐ(ಎಂ)ನ ರಾಜ್ಯಸಭಾ ಸದಸ್ಯ ಎಳಮರಮ್ ಕರೀಂ ವಿರುದ್ಧ ನೀಡಿದ ಹೇಳಿಕೆಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ಅವರನ್ನು ಸೂಚಿಸಲಾಗಿದೆ. ಏತನ್ಮಧ್ಯೆ, ಎಸ್‌ಎಫ್‌ಐ ನಡೆಸಿದ ಈ ಕೃತ್ಯವನ್ನು ಪತ್ರಕರ್ತರು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.