ಹೋಳಿ, ಪ್ರಪಂಚದ ವಿವಿಧ ಭಾಗಗಳಲ್ಲಿ ಆಚರಿಸಲಾಗುವ ಪ್ರಸಿದ್ಧ ವರ್ಣರಂಜಿತ ಹಬ್ಬ. ಇನ್ನು ಹಬ್ಬಗಳ ನಾಡು ಎಂದೂ ಕರೆಯಲ್ಪಡುವ ಭಾರತದಲ್ಲಿ ಈ ಹಬ್ಬವನ್ನ ಇನ್ನೂ ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಚಿತೆಯ ಬೂದಿ ಅಂದರೆ ಭಸ್ಮದಿಂದ ಈ ಹಬ್ಬವನ್ನ ’ಮಸಾನ್ ಹೋಳಿ’ (ಸ್ಮಶಾನದ ಹೋಳಿ) ಹಬ್ಬದ ಹೆಸರಿನಿಂದ ಆಚರಿಸುತ್ತಾರೆ.
ವಾರಣಾಸಿಯ ಮನಿಕರ್ಣಿಕಾ ಘಾಟ್‌ನಲ್ಲಿ ವರ್ಷದ 365 ದಿನವೂ ಚಿತೆಯ ಬೆಂಕಿ ಧಗಧಗನೆ ಹೊತ್ತಿ ಉರಿಯುತ್ತಲೇ ಇರುತ್ತೆ. ಇದೇ ಚಿತೆಯ ಭಸ್ಮದಿಂದ ತಲೆತಲಾಂತರದಿಂದ ಇಲ್ಲಿನ ಜನರ ಹೋಳಿ ಹಬ್ಬವನ್ನ ಆಚರಿಸುತ್ತಾರೆ. ಅಷ್ಟೆ ಅಲ್ಲ ಇದೇ ಘಾಟ್‌ನಲ್ಲಿ ಹೆಣಗಳನ್ನ ಸುಟ್ಟ ಬೂದಿಯಿಂದಲೇ ಇಲ್ಲಿರೋ ಶಿವನ ಮೂರ್ತಿಗೆ ಅಭಿಷೇಕ ಮಾಡಲಾಗುತ್ತೆ. ಈ ಬೂದಿ ಶಿವನಿಗೆ ಅತ್ಯಂತ ಪ್ರೀತಿ ಎನ್ನಲಾಗಿದೆ.
ಬಾಬಾ ವಿಶ್ವನಾಥ್ ಅಂದರೆ ಶಿವನು ಮಧ್ಯಾಹ್ನ ಮಣಿಕರ್ಣಿಕಾ ಘಾಟ್‌ನಲ್ಲಿ ಸ್ನಾನ ಮಾಡಲು ಬರುತ್ತಾನೆ ಅನ್ನೊ ನಂಬಿಕೆ ಇದೆ. ಇದೇ ಕಾರಣಕ್ಕೆ ಈ ಸಂಪ್ರದಾಯವನ್ನು ಪೂರ್ಣ ಉತ್ಸಾಹ ಮತ್ತು ಸಂಭ್ರಮದಿಂದಾ ಆಚರಣೆ ಮಾಡಲಾಗುತ್ತಿದೆ.
ಸಂಪ್ರದಾಯದ ಪ್ರಕಾರ, ಮೊದಲು ಸ್ಮಶಾನನಾಥನ ವಿಗ್ರಹದ ಮೇಲೆ ಗುಲಾಲ್ ಮತ್ತು ಚಿತಾ ಭಸ್ಮವನ್ನು ಹಚ್ಚಿದ ನಂತರ, ಬೆಂಕಿ ಆರಿದ ಚಿತೆಗಳ ಭಸ್ಮವನ್ನು ಅದೇ ಘಾಟ್‌ನಲ್ಲಿ ಎತ್ತಿ ಪರಸ್ಪರ ಎಸೆಯುವ ಮೂಲಕ ಭಸ್ಮದ ಹೋಳಿ ಹಬ್ಬವನ್ನ ಆಚರಿಸುತ್ತಾರೆ.
ಈ ರೀತಿಯಾಗಿ ಚಿತಾ ಭಸ್ಮದಿಂದ ಹೋಳಿ ಆಡಿದರೆ ಬಾಬಾ ವಿಶ್ವನಾಥನ ಕೃಪೆಯಿಂದ ಯಾವುದೇ ದೆವ್ವ, ಭೂತ, ಪಿಶಾಚಿಯಂತಹ ಶಕ್ತಿಗಳು ತೊಂದರೆ ಕೊಡುವುದಿಲ್ಲ ಎಂದು ಶಿವ ಭಕ್ತರು ನಂಬಿದ್ದಾರೆ.
ವಿವಿಧ ರೀತಿಯ ಬಣ್ಣಗಳನ್ನು ಬಿಟ್ಟು ಚಿತಾ ಭಸ್ಮದಿಂದ ಆಚರಿಸಲಾಗುವ ಈ ಸಾಂಪ್ರದಾಯಿಕ ಹೋಳಿ ಹಬ್ಬವನ್ನು ನೋಡಲು ಪ್ರಪಂಚದಾದ್ಯಂತದ ಜನರು ಬರುತ್ತಾರೆ. ನೀವು ಹೋಗಲು ಬಯಸಿದರೆ, ನೀವು ರಂಗ್ಭರಿ ಏಕಾದಶಿಗೆ ವಾರಣಾಸಿಗೆ ಹೋಗ್ಬಹುದು. ಅಲ್ಲಿ ಈ ವಿಶೇಷ ಹೋಳಿ ಹಬ್ಬವನ್ನ ನೋಡಬಹುದು.