ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 2019 ರಲ್ಲಿ ಗೋ- ಸಂರಕ್ಷಣೆ ಮಾಡುವುದಾಗಿ ಭರವಸೆ ನೀಡಿ ಆಡಳಿತಕ್ಕೆ ಬಂದ ಬಿ.ಜೆ.ಪಿ. ನೇತ್ರತ್ವದ ಪಾಲಿಕೆ ಆಡಳಿತ 2019 ರಿಂದ 2023 ರ ವರೆಗೆ ಮಂಡಿಸಿದ 5 ವರ್ಷಗಳ ಆಯವ್ಯಯದಲ್ಲಿ ( ಬಜೆಟ್ ) 50 ಲಕ್ಷ ರೂ.ಗಳನ್ನು ಗೋ- ಸಂರಕ್ಷಣ ಯೋಜನೆಗೆ ಅನುದಾನ ಘೋಷಿಸಿದ್ದು, ಆದರೆ ಈ ಯೋಜನೆ ಅಡಿಯಲ್ಲಿ ಮೇಲ್ಕಂಡ ಯೋಜನೆಗೆ ನಯಾಪೈಸೆಯನ್ನು ವಿನಿಯೋಗಿಸದೆ, ಗೋ- ಮಾತೆಗೆ ಅವಮಾನ ಮಾಡಿದೆ ಎಂದು ಆರೋಪಿಸಿ ಬಿ.ಜೆ.ಪಿ. ಪಾಲಿಕೆ ಆಡಳಿತ ವಿರುದ್ದ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಗೋ ಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೇಖಾ ರಂಗನಾಥ್, ಬಿಜೆಪಿಯ ನಾಯಕರು ಚುನಾವಣೆ ಸಂದರ್ಭದಲ್ಲಿ ನಾವು ಗೋ ರಕ್ಷಕರು. ಗೋ ಸಂರಕ್ಷಣೆ ಮಾಡುವುದಕ್ಕಾಗಿ ನಾವು ಅಧಿಕಾರಕ್ಕೆ ಬರುವುದೆಂದು ಸುಳ್ಳು ಹೇಳಿ, ಅಧಿಕಾರಕ್ಕೆ ಬಂದ ನಂತರ 2019 ರಿಂದ 2023ನೇ ಬಜೆಟ್ ವರೆಗೂ ಗೋ ಸಂರಕ್ಷಣೆಗೆ 50 ಲಕ್ಷ ರೂಪಾಯಿ ಎಂಬ ಮುದ್ರಣ ಮಾತ್ರ ತೋರಿಸುತ್ತಿದ್ದು, ಗೋವುಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೆ ಸುಳ್ಳು ಹೇಳಿ ಕಾಲ ಕಳೆಯುತ್ತಿದ್ದಾರೆ. ಕೂಡಲೇ ಬಜೆಟ್ ನಲ್ಲಿ ತೆಗೆದಿಟ್ಟಂತ 50 ಲಕ್ಷ ಹಣವನ್ನು ಗೋ ಸಂರಕ್ಷಣೆ ಕಾರ್ಯಕ್ರಮಕ್ಕೆ ಬಿಡುಗಡೆ ಮಾಡದಿದ್ದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಮಹಾನಗರದ ಜನತೆಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಈ ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್, ಬಿ.ಎ. ರಮೇಶ್ ಹೆಗ್ಡೆ, ಆರ್.ಸಿ. ನಾಯ್ಕ್, ಮೆಹೆಕ್ ಷರೀಫ್ ಹಾಗೂ ಮುಖಂಡರಾದ ಕೆ. ರಂಗನಾಥ‍್, ಎಂ. ಪ್ರವೀಣ್ ಕುಮಾರ್ , ಹೆಚ್.ಪಿ. ಗಿರೀಶ್, ಎಸ್. ಕುಮರೇಶ‍್, ಮಾಲ್ತೇಶ್,ಇರ್ಫಾನ್ ಮೊದಲಾದವರಿದ್ದರು.