ಬೆಳಗಾವಿ; ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಅಡುಗೆ ಸಿಲಿಂಡರ್ ದರವನ್ನು ಮತ್ತೆ 50 ರೂಪಾಯಿ ಏರಿಸಿದ್ದಾರೆ. ಹೆಣ್ಣುಮಕ್ಕಳು ಹೈರಾಣಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಗೆ ಪ್ರಧಾನಿ ಮೋದಿ ಭೇಟಿ ಬಳಿಕ ಈಗ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದು, ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ರೈತರ ರಕ್ತ ಹೀರಿ 6 ಸಾವಿರ ರೂಪಾಯಿ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಾ ಪ್ರಧಾನಿ ಮೋದಿ ತಿರುಗಾಡುತ್ತಿದ್ದಾರೆ. ಮಜ್ಜಿಗೆ ಮೇಲೆ, ಪೆನ್ಸಿಲ್ ಮೇಲೆ, ಗೊಬ್ಬರದ ಮೇಲೆ ತೆರಿಗೆ ಹಾಕಿ ರೈತರಿಗೆ, ಜನಸಾಮಾನ್ಯರಿಗೆ ಬರೆ ಎಳೆದಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿಯವರೇ ನೀವು ನಾಲ್ಕುವರೆ ಲಕ್ಷ ಕೋಟಿ ಕರ್ನಾಟಕದ ಜನರಿಂದ ಸುಲಿಗೆ ಮಾಡುತ್ತಿದ್ದೀರಿ. ಆದರೆ ನಮಗೆ ಅನುದಾನದ ರೂಪದಲ್ಲಿ ವಾಪಸ್ ಕೊಡುವುದು ಕೇವಲ 50 ಸಾವಿರ ಕೋಟಿ ಮಾತ್ರ ಎಂದು ವಾಗ್ದಾಳಿ ನಡೆಸಿದ್ದಾರೆ.