ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಅವರು ಇಂದು ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ನಾಯಕರೊಂದಿಗೆ ಚರ್ಚಿಸಿದ್ದಾರೆ.
ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜಕೀಯ ಸೇರುವ ಉದ್ದೇಶದಿಂದ ಪೊಲೀಸ್ ಇಲಾಖೆ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರವಾದ ನಂತರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅವರು ಆರಂಭದಲ್ಲಿ ಸಕ್ರಿಯರಾಗಿದ್ದರು. ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದು, ಈಗ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.
ಬಿಜೆಪಿ ಸೇರುವ ಕುರಿತಂತೆ ಇಂದು ಕಂದಾಯ ಸಚಿವ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ಅಣ್ಣಾಮಲೈ ಮೊದಲಾದ ನಾಯಕರೊಂದಿಗೆ ಚರ್ಚೆ ಅವರು ನಡೆಸಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಬಿಜೆಪಿ ಸೇರಲಿದ್ದಾರೆ.
ಮಾರ್ಚ್ 4 ರಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಇದೇ ಹೊತ್ತಲ್ಲಿ ಭಾಸ್ಕರ್ ರಾವ್ ಪಕ್ಷ ತೊರೆಯುತ್ತಿದ್ದಾರೆ.