ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಶಿಕ್ಷೆಯಾದರೂ ಏಕಕಾಲಕ್ಕೆ ಜಾರಿ ಮಾಡಿ ಜೀವಾವಧಿ ಶಿಕ್ಷೆಯ ಅವಧಿಯೊಳಗೆ ಉಳಿದ ಶಿಕ್ಷೆ ಅವಧಿ ಸೇರಿಸಿ ಎಂದು ಹೈಕೋರ್ಟ್ ಸೂಚಿಸಿದೆ.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದರೋಡೆ ಪ್ರಕರಣದಲ್ಲಿ ನಿಗದಿತ ಅವಧಿಯ ಜೈಲು ಶಿಕ್ಷೆ ವಿಧಿಸಿದ್ದಲ್ಲಿ ಜೀವಾವಧಿ ಶಿಕ್ಷೆಯ ಅವಧಿಯೊಳಗೆ ಉಳಿದ ಶಿಕ್ಷೆ ಅವಧಿ ಎಂದು ಸೇರಿಸಿ ಜೈಲು ಶಿಕ್ಷೆ ಅನುಭವಿಸಬೇಕು. ಒಂದು ಶಿಕ್ಷೆ ಅವಧಿ ಮುಗಿದ ನಂತರ ಮತ್ತೊಂದು ಶಿಕ್ಷೆ ಅನುಭವಿಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ರಾಮಚಂದ್ರರೆಡ್ಡಿ ಮತ್ತು ಸುಕುಮಾರ್ ಎಂಬುವರಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, ದರೋಡೆ ನಡೆಸುವಾಗ ನೋವುಂಟು ಮಾಡಿದ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕೆ ಅಥವಾ ಪ್ರತ್ಯೇಕವಾಗಿ ಅನುಭವಿಸಬೇಕೆ ಎಂಬುದರ ಕುರಿತಾಗಿ ಕೋರ್ಟ್ ಸ್ಪಷ್ಟನೆ ನೀಡಿರಲಿಲ್ಲ. ಹೀಗಾಗಿ ಅವರು ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಅರ್ಜಿದಾರರು ಎರಡು ಶಿಕ್ಷೆಗಳ ಅವಧಿಯನ್ನು ಏಕಕಾಲಕ್ಕೆ ಅನುಭವಿಸಬೇಕು ಎಂದು ತಿಳಿಸಿದೆ. 22 ವರ್ಷದಿಂದ ಜೈಲಿನಲ್ಲಿರುವ ಈ ಇಬ್ಬರು ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆ ಅಥವಾ ಕ್ಷಮಾದಾನಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.