ಬೆಳಗಾವಿ: ಬೆಳಗಾವಿಗೆ ಬರುವುದು ಯಾವುದೇ ತೀರ್ಥಯಾತ್ರೆಗಿಂತ ಕಡಿಮೆಯಿಲ್ಲ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಪುಣ್ಯಭೂಮಿಯಿದು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರಕ್ಕೆ ಸ್ಫೂರ್ತಿ ನೀಡಿದ ಬಸವಣ್ಣನವರಿಗೆ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಗಡಿ ಜಿಲ್ಲೆ, ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು.
ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ ಕರ್ನಾಟಕದ 49 ಲಕ್ಷ ರೈತರಿಗೆ ಇದು ನೆರವಾಗಲಿದೆ ಎಂದರು.
ಬೆಳಗಾವಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಹಿಂದೂಸ್ತಾನದ ಎಲ್ಲ ರೈತರನ್ನು ಇಂದು ಬೆಳಗಾವಿ ಜತೆ ಬಾಂಧವ್ಯ ಹೊಂದುವಂತೆ ಮಾಡಲಾಗುತ್ತಿದೆ. ದೇಶದ ಎಲ್ಲಾ ರೈತರ ಖಾತೆಗಳಿಗೆ ಒಂದು ಕ್ಲಿಕ್ ಮೂಲಕ ಹಣ ವರ್ಗಾವಣೆ ಆಗಿದೆ. ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಬದಲಾಗುತ್ತಿರುವ ಭಾರತದಲ್ಲಿ ಒಂದಾದ ಮೇಲೊಂದರಂತೆ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.
ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಭಾರತದ ನವ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ಮಹತ್ವದ್ದಾಗಿದೆ. ನೂರು ವರ್ಷಗಳಿಗೂ ಮೊದಲೇ ಇಲ್ಲಿ ಸ್ಟಾರ್ಟ್ ಅಪ್ ಗಳು ಆರಂಭವಾಗಿದ್ದವು. ಬಾಬುರಾವ್ ಸಣ್ಣದಾದ ಘಟಕವೊಂದನ್ನು ಸ್ಥಾಪಿಸಿದ್ದರು. ಈಗ ಬೆಳಗಾವಿಯ ಅಭಿವೃದ್ಧಿಗೆ ಹೊಸ ಗತಿ ಬಂದಿದೆ ಎಂದರು.