ಚೀನಾ ಪಾಕಿಸ್ತಾನ ಹಾಗೂ ಹಾಂಕಾಂಗ್ ನಲ್ಲಿ ತರಬೇತಿ ಪಡೆದಿರುವ ಅಪಾಯಕಾರಿ ವ್ಯಕ್ತಿ ವಾಣಿಜ್ಯ ನಗರಿ ಮುಂಬೈ ಪ್ರವೇಶಿಸಿದ್ದಾನೆ ಎನ್ನಲಾಗಿದ್ದು, ಈ ಕುರಿತಂತೆ ರಾಷ್ಟ್ರೀಯ ತನಿಖಾ ದಳ, ಮುಂಬೈ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಮಾಹಿತಿ ರವಾನಿಸಿದೆ.
ಮೂಲತಃ ಇಂದೋರ್ ನವನಾದ ಸರ್ಫ್ರಾಜ್ ಮೆಮೂನ್ ಈಗಾಗಲೇ ಮುಂಬೈ ತಲುಪಿದ್ದಾನೆ ಎನ್ನಲಾಗಿದ್ದು, ಆತನ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮೊದಲಾದವುಗಳ ವಿವರವನ್ನು ಇ-ಮೇಲ್ ಮೂಲಕ ಕಳುಹಿಸಿಕೊಡಲಾಗಿದೆ.
ಆ ಬಳಿಕ ಮುಂಬೈ ಪೊಲೀಸರು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇಂದೋರ್ ಪೊಲೀಸರಿಗೂ ಸಹ ವಿಷಯ ತಿಳಿಸಿದ್ದು, ಮುಂಬೈ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಶಂಕಿತನನ್ನು ಅಪಾಯಕಾರಿ ವ್ಯಕ್ತಿ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ.