ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದ್ದು, ಈಗಾಗಲೇ ಪ್ರಚಾರ ಕಾರ್ಯವನ್ನು ಸಹ ಆರಂಭಿಸಿದ್ದಾರೆ. ಇದರ ಮಧ್ಯೆ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಪೋಲ್ ಹೌಸ್ ಎಂಬ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದ್ದು, ಸಿದ್ದರಾಮಯ್ಯನವರ ಸ್ಪರ್ಧೆಗೆ ಕೋಲಾರ ಸುರಕ್ಷಿತ ಕ್ಷೇತ್ರ ಎಂಬುದು ಇದರಲ್ಲಿ ಬಹಿರಂಗವಾಗಿದೆ. ಸಂಸ್ಥೆಯ 60 ಮಂದಿಯ ತಂಡ ಕೋಲಾರ ವಿಧಾನಸಭಾ ಕ್ಷೇತ್ರದಾದ್ಯಂತ ಈ ಸಮೀಕ್ಷೆಯನ್ನು ನಡೆಸಿತ್ತು ಎಂದು ಹೇಳಲಾಗಿದೆ.
ಸಮೀಕ್ಷೆಯಲ್ಲಿ ಅಂದಾಜು 20,000 ಜನರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಬಹುತೇಕ ಮಂದಿ ಸಿದ್ದರಾಮಯ್ಯನವರ ಸ್ಪರ್ಧೆಗೆ ಒಲವು ತೋರಿದ್ದಾರೆ ಎಂಬ ಸಂಗತಿ ತಿಳಿದು ಬಂದಿದೆ. ತಮ್ಮ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವೂ ಹಲವರಿಂದ ವ್ಯಕ್ತವಾಗಿದೆ.