ಬ್ಯಾಂಕ್ ವಹಿವಾಟುಗಳು ಮೊಬೈಲ್ ಮೂಲಕವೇ ನಡೆಯಲಾರಂಭಿಸಿದ ಬಳಿಕ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ. ಕಂಪ್ಯೂಟರ್ ಮೂಲಕ ವಹಿವಾಟು ನಡೆಸುವಾಗಲೂ ಸಹ ವಂಚನೆ ಪ್ರಕರಣಗಳು ನಡೆಯುತ್ತಿದ್ದು, ಇದೀಗ ಇದರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.
ಫೆಬ್ರವರಿ 24ರಂದು ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಿರುವ ಅಸ್ಸಾಂ ಪೊಲೀಸರು ಮೂವರು ಸೈಬರ್ ಅಪರಾಧಿಗಳನ್ನು ಬಂಧಿಸಿದ್ದು, ಅವರಿಂದ ಬರೋಬ್ಬರಿ 1,720 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಮೊಹಿರಾಬಾರಿ ಪಟ್ಟಣದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.
ಆರೋಪಿಗಳಾದ ಇಶಾಕ್ ಅಲಿ, ರಬ್ಬುಲ್ ಅಸ್ಲಾಂ ಹಾಗೂ ಗೈಸ್ ಉದ್ದಿನ್ ಬಂಧಿತರಾಗಿದ್ದು, ಆರೋಪಿಗಳಿಂದ 11 ಮೊಬೈಲ್ ಫೋನ್, ಒಂದು ಪಲ್ಸರ್ ಬೈಕ್ ಸಹ ವಶಕ್ಕೆ ಪಡೆಯಲಾಗಿದೆ. ಆನ್ಲೈನ್ ವಂಚನೆ ಮೂಲಕ ಇವರುಗಳು ಭಾರಿ ಪ್ರಮಾಣದಲ್ಲಿ ಹಣ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.