ಬೆಂಗಳೂರು: ಕೊಲೆಗಡುಕ ರಾಜ್ಯ ಬಿಜೆಪಿ ಸರ್ಕಾರ ನಮ್ಮ ಶಿಕ್ಷಕರನ್ನು ಕೊಂದಿದೆ ಎಂದು ಹೋರಾಟ ನಿರತ ಶಿಕ್ಷಕರು ಆರೋಪಿಸಿದ್ದಾರೆ.
ರಾಜ್ಯ ಅನುದಾನಿತ ಶಾಲಾ ನೌಕರರ ಸಂಘದ ಅಧ್ಯಕ್ಷ ಹನುಮಂತ ಹೀಗೆಂದು ಆರೋಪ ಮಾಡಿದ್ದು, 141 ದಿನದಿಂದ ಮುಷ್ಕರ ನಡೆಸಿದರೂ ನನ್ನ ಗಮನಕ್ಕೆ ಬಂದಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಹೇಳುತ್ತಾರೆ. ಇಬ್ಬರ ಸಾವಿಗೆ ಸಚಿವರಾದ ಬಿ.ಸಿ. ನಾಗೇಶ್ ಮತ್ತು ಡಾ. ಅಶ್ವತ್ಥ್ ನಾರಾಯಣ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಮುಂದೆ ಮತ್ತೆಂದೂ ಮುಷ್ಕರ ನಡೆಸುವುದಿಲ್ಲ. ಬಿಜೆಪಿ ಸರ್ಕಾರದ ಮುಂದೆ ಪ್ರತಿಭಟನೆ ನಡೆಸಿ ಶಿಕ್ಷಕರನ್ನು ಕಳೆದುಕೊಳ್ಳಲಾರೆವು. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರದ ಮುಂದೆ ಮುಷ್ಕರ ನಡೆಸುತ್ತೇವೆ ಎಂದು ಅನುದಾನಿತ ಶಾಲಾ ನೌಕರರ ಸಂಘದ ಅಧ್ಯಕ್ಷ ಹನುಮಂತ ಹೇಳಿದ್ದಾರೆ.
ಶಿಕ್ಷಕ ಸಿದ್ಧಯ್ಯ ಹಿರೇಮಠ ಮೃತದೇಹ ಹಸ್ತಾಂತರ
ಮೃತ ಶಿಕ್ಷಕ ಸಿದ್ದಯ್ಯ ಹಿರೇಮಠ ಮರಣೋತ್ತರ ಪರೀಕ್ಷೆ ಅಂತ್ಯವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ಹೋರಾಟ ನಿರತ ಸಿದ್ದಯ್ಯ ಹಿರೇಮಠ ನಿಧನರಾಗಿದ್ದರು. ಅವರ ಕುಟುಂಬದವರಿಗೆ ಉಪ್ಪಾರಪೇಟೆ ಠಾಣೆ ಪೊಲೀಸರ ಸಮ್ಮುಖದಲ್ಲಿ ಮೃತ ದೇಹವನ್ನು ಹಸ್ತಾಂತರ ಮಾಡಲಾಗಿದ್ದು, ಕುಟುಂಬದವರು ಬಾಗಲಕೋಟೆಗೆ ಮೃತದೇಹ ತೆಗೆದುಕೊಂಡು ಹೋಗಿದ್ದಾರೆ.
ಧರಣಿ ವೇಳೆ ವಿಷ ಸೇವಿಸಿ ಸಿದ್ದಯ್ಯ ಹಿರೇಮಠ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಫ್ರೀಡಂ ಪಾರ್ಕ್ ನಲ್ಲಿ ಅನುದಾನಿತ ಶಿಕ್ಷಕರು ಪಿಂಚಣಿಗೆ ಆಗ್ರಹಿಸಿ 141 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅನುದಾನಿತ ಶಿಕ್ಷಕರನ್ನು ಪಿಂಚಣಿ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದ ಆರೋಪ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಸಿದ್ದಯ್ಯ ಹಿರೇಮಠ ಸಾವಿನಿಂದಾಗಿ ಶಿಕ್ಷಕರು ಧರಣಿ ಹಿಂಪಡೆದುಕೊಂಡಿದ್ದಾರೆ. ಸರ್ಕಾರದ ನಡೆಗೆ ನಮ್ಮ ಶಿಕ್ಷಕರನ್ನು ಬಲಿಕೊಡಲು ಬಿಡುವುದಿಲ್ಲ. ಶಿಕ್ಷಕರ ಸಾವಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿ ಧರಣಿ ವಾಪಸ್ ಪಡೆದುಕೊಂಡಿದ್ದಾರೆ.