ಪೂಲ್ ಗೇಮ್ ನಲ್ಲಿ ಸೋತ ವೇಳೆ ತಮ್ಮನ್ನು ನೋಡಿ ನಕ್ಕರೆಂಬ ಕ್ಷುಲ್ಲಕ ಕಾರಣಕ್ಕೆ ಇಬ್ಬರು ದುಷ್ಕರ್ಮಿಗಳು 12 ವರ್ಷದ ಬಾಲಕಿ ಸೇರಿದಂತೆ ಏಳು ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇಂತಹದೊಂದು ಘೋರ ಕೃತ್ಯ ಬ್ರೆಜಿಲ್ ನಲ್ಲಿ ನಡೆದಿದ್ದು ಇದರ ಶಾಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮೊದಲಿಗೆ ವ್ಯಕ್ತಿಯೊಬ್ಬ ಪೂಲ್ ಗೇಮ್ ನಲ್ಲಿ ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದಾನೆ. ಬಳಿಕ ಆತ ಅಲ್ಲಿಂದ ತೆರಳಿದ್ದು ಸ್ವಲ್ಪ ಹೊತ್ತಿನ ನಂತರ ತನ್ನ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದು ಮತ್ತೊಮ್ಮೆ ಆಟವಾಡಲು ಮುಂದಾಗಿದ್ದಾರೆ. ಅದರಲ್ಲೂ ಇಬ್ಬರು ಸೋತಿದ್ದು ಆಗ ಸ್ಥಳದಲ್ಲಿದ್ದ ಕೆಲವರು ಅಪಹಾಸ್ಯ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಅವರುಗಳು ಮೊದಲಿಗೆ ಎದುರಾಳಿಯನ್ನು ಗುಂಡಿಟ್ಟು ಕೊಂದಿದ್ದಾರೆ.
ನಂತರ ಸ್ಥಳದಲ್ಲಿದ್ದ ಇತರರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ 12 ವರ್ಷದ ಬಾಲಕಿ ಸೇರಿದಂತೆ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಓರ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರೋಪಿಗಳು ಅಲ್ಲಿಂದ ಒಂದಷ್ಟು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಇಬ್ಬರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಎಂದು ಹೇಳಲಾಗಿದ್ದು, ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಸಿನಾಪ್ ಸಿಟಿಯಲ್ಲಿ ಈ ಅಪರಾಧ ಕೃತ್ಯ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಪರಾಧ ಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಅವರುಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.