ಕೇವಲ 30 ರೂಪಾಯಿಗಳಿಗಾಗಿ ಶುರುವಾದ ಜಗಳ ಓರ್ವನ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ. ಮದುವೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸೋನು ಎಂಬಾತ ಮೃತಪಟ್ಟಿದ್ದಾನೆ.
ಗುರುವಾರ ದೆಹಲಿಯ ಮಾಡೆಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರಾಹುಲ್ ಹಾಗೂ ಆತನ ಸಹೋದರ ಹರೀಶ್, ಸೋನುವಿನ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಇರಿಯುವ ಮೂಲಕ ಹತ್ಯೆಗೈದಿದ್ದಾರೆ.
ಸೋನು ಹಾಗೂ ರಾಹುಲ್ ಒಟ್ಟಿಗೆ ಅಡುಗೆ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಸೋನು ಮೂವತ್ತು ರೂಪಾಯಿ ಪಡೆದುಕೊಂಡಿದ್ದಾನೆ. ಆದರೆ ಎಷ್ಟು ದಿನಗಳಾದರೂ ಕಾಲ ಹಿಂದಿರುಗಿಸದ ಕಾರಣ ಇವರಿಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.
ಗುರುವಾರದಂದು ತನ್ನ ಸಹೋದರ ಹರೀಶ್ ನನ್ನ ಕರೆದುಕೊಂಡು ರಾಹುಲ್, ಸೋನು ಬಳಿಗೆ ಬಂದಿದ್ದು, ಮೂವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಇದು ವಿಕೋಪಕ್ಕೆ ತೆರಳಿದ ಬಳಿಕ ಸಹೋದರರು ಸೋನುವಿಗೆ ಚಾಕುವಿನಿಂದ ಇರಿದಿದ್ದಾರೆ.
ಗಲಾಟೆ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಸೋನುನನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ. ಇದೀಗ ಸಹೋದರರನ್ನು ಬಂಧಿಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.