ನವದೆಹಲಿ: ರಾಜ್ಯದಲ್ಲಿ ನಡೆದಿದ್ದ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕೀಲರು ಪಿ ಐ ಎಲ್ ಸಲ್ಲಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿನಿಯರು ಈಗಾಗಲೇ ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ. ಮಾರ್ಚ್ 9ರಿಂದ ಮುಂದಿನ ಪರೀಕ್ಷೆಗಳು ಆರಂಭವಾಗುತ್ತಿದ್ದು ಶೀಘ್ರವೇ ವಿಚಾರಣೆ ನಡೆಸುವಂತೆ ವಕೀಲ ಶಾದನ್ ಫರಾಸತ್ ಮನವಿ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ವಿಚಾರಣೆಗೆ ಪೀಠ ರಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಾಲೇಜು ಕ್ಯಾಂಪಸ್ ಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ. ಈ ಕುರಿತು ವಿಚಾರಣೆ ನಡೆಸಲು ಸಮಯ ಬೇಕು. ಶೀಘ್ರದಲ್ಲಿಯೇ ತ್ರಿಸದಸ್ಯ ಪೀಠದಿಂದ ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.