ಮೂರು ವರ್ಷಗಳ ಹಿಂದೆ ಭಾರತಕ್ಕೆ ವಕ್ಕರಿಸಿದ ಕೊರೊನಾ ಮಹಾಮಾರಿ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿತ್ತು. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಮಕ್ಕಳು ತಮ್ಮ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು.
ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ಆರ್ಥಿಕವಾಗಿ ಜನತೆ ಹೈರಾಣಾಗಿದ್ದರು. ಅಂದಿನ ದಿನಮಾನಗಳಲ್ಲಿ ಹೊರಗೆ ಹೋಗಲೂ ಸಹ ಜನ ಹೆದರುತ್ತಿದ್ದರು. ಆತ್ಮೀಯರ ಜೊತೆ ಮಾತನಾಡಲು, ಕೈ ಕುಲುಕಲು ಸಹ ಹಿಂದೆ ಮುಂದೆ ನೋಡುವಂತಾಗಿತ್ತು.
ಆದರೆ ಪರಿಸ್ಥಿತಿ ಈಗ ತಹಬದಿಗೆ ಬಂದಿದೆ. ದೇಶದಲ್ಲಿ ಕೊರೊನಾ ಸಂಪೂರ್ಣವಾಗಿ ತೊಲಗಿಲ್ಲವಾದರೂ ಈ ಹಿಂದಿನಂತೆ ಮಾರಣಾಂತಿಕವಾಗಿಲ್ಲ. ಅಲ್ಲದೆ ಜನತೆ ಈಗ ಅದರ ಜೊತೆ ಹೊಂದಿಕೊಂಡು ಬದುಕುವುದನ್ನು ಕಲಿತಿದ್ದಾರೆ. ಆದರೆ ಕೊರೊನಾ ಬಗ್ಗೆ ಇನ್ನಿಲ್ಲದಂತೆ ಭಯ ಹೊಂದಿದ್ದ ಮಹಿಳೆಯೊಬ್ಬರು ಮೂರು ವರ್ಷಗಳ ಕಾಲ ಯಾರೊಂದಿಗೂ ಸಂಪರ್ಕಕ್ಕೆ ಬಾರದಂತೆ ತಮ್ಮ ಮನೆಯಲ್ಲೇ ಹತ್ತು ವರ್ಷದ ಮಗನ ಜೊತೆ ಲಾಕ್ ಆಗಿದ್ದ ನಂಬಲಸಾಧ್ಯ ಘಟನೆ ಈಗ ಬಹಿರಂಗವಾಗಿದೆ.
ಗುರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮುನ್ಮುನ್ ಮಾಂಜಿ ಎಂಬ ಈ ಮಹಿಳೆ ತನ್ನ ಹತ್ತು ವರ್ಷದ ಮಗನೊಂದಿಗೆ ಮಾರುತಿ ಕುಂಜ್ ನಲ್ಲಿರುವ ತನ್ನ ಮನೆಯಲ್ಲಿ ಬಂಧಿಯಾಗಿದ್ದು ಪತಿಗೂ ಸಹ ಮನೆಗೆ ಬರಲು ಅವಕಾಶ ನೀಡುತ್ತಿರಲಿಲ್ಲ. ಈಕೆಯ ಪತಿ ಸುಜನ್ ಇಂಜಿನಿಯರ್ ಆಗಿದ್ದು, ಈವರೆಗೆ ಆಹಾರ ಪದಾರ್ಥ ಹಾಗೂ ದಿನಬಳಕೆ ವಸ್ತುಗಳನ್ನು ಮನೆಯ ಕಿಟಕಿಯಲ್ಲಿ ಇರಿಸಿ ಹೋಗುತ್ತಿದ್ದ.
ಮೊದಲ ಲಾಕ್ ಡೌನ್ ಆದ ಸಂದರ್ಭದಲ್ಲಿ ಪತಿ ಹೊರಗೆ ಇದ್ದು ಆ ಬಳಿಕ ಮುನ್ಮನ್ ಕೊರೊನಾ ಕಾರಣಕ್ಕೆ ಆತನನ್ನು ಮನೆಗೆ ಸೇರಿಸಿರಲಿಲ್ಲ. ಆ ಬಳಿಕ ವಿಧಿ ಇಲ್ಲದೆ ಸುಜನ್ ಅದೇ ಏರಿಯಾದಲ್ಲಿ ಮತ್ತೊಂದು ಮನೆ ಮಾಡಿ ವಾಸಿಸಲು ಆರಂಭಿಸಿದ್ದು, ಪತ್ನಿ ಮಗನೊಂದಿಗೆ ವಿಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿದ್ದ. ಅವರಿಗೆ ಬೇಕಾದ ವಸ್ತುಗಳನ್ನು ತಿಳಿಸಿದ ವೇಳೆ ತಂದು ಮನೆಯ ಹೊರಗೆ ಇರಿಸಿ ಹೋಗುತ್ತಿದ್ದ. ಕೊರೊನಾ ಈಗ ಸಂಪೂರ್ಣವಾಗಿ ಇಳಿಮುಖವಾಗಿದೆ ಎಂದರೂ ಆಕೆ ನಂಬುತ್ತಿರಲಿಲ್ಲ.
ಕೊನೆಗೆ ವಿಧಿ ಇಲ್ಲದ ಪತಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೊದಲಿಗೆ ಪೊಲೀಸರು ಇದೊಂದು ಕೌಟುಂಬಿಕ ಸಮಸ್ಯೆ ಎಂದು ಭಾವಿಸಿದ್ದರು. ಯಾವಾಗ ಮುನ್ಮಾನ್ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದರೋ ಆಗ ಅವರಿಗೂ ಪರಿಸ್ಥಿತಿಯ ಅರಿವಾಗಿದೆ. ಅಂತಿಮವಾಗಿ ಬಾಗಿಲು ಒಡೆದು ತಾಯಿ, ಮಗನನ್ನು ಹೊರ ಕರೆ ತಂದಿದ್ದು, ಮೂರು ವರ್ಷಗಳ ಕಾಲ ಬಿಸಿಲನ್ನೇ ಕಾಣದ ಹತ್ತು ವರ್ಷದ ಮಗು ಬಸವಳಿದು ಹೋಗಿತ್ತು. ಈಗ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮನೋವೈದ್ಯರು ಮುನ್ಮುನ್ ಗೆ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ.