ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕದನ ತಾರಕಕ್ಕೇರಿದ್ದು, ಇಬ್ಬರು ಅಧಿಕಾರಿಗಳ ಬೀದಿ ರಂಪ ಸರ್ಕಾರಕ್ಕೂ ಮುಜುಗರವನ್ನುಂಟು ಮಾಡಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞನೇಂದ್ರ, ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷ ಗಮನಿಸುತ್ತಿದ್ದೇವೆ. ಗೃಹ ಇಲಾಖೆ, ಸರ್ಕಾರ ಯಾರೂ ಕಣ್ಮುಚ್ಚಿಕುಳಿತುಕೊಂಡಿಲ್ಲ. ಎಲ್ಲವೂ ಗಮನಕ್ಕೆ ಇದೆ. ವೈಯಕ್ತಿಕ ವಿಚಾರ ಏನೇ ಇರಬಹುದು ಆದರೆ ಈ ರೀತಿ ಮಾಧ್ಯಮಗಳ ಮುಂದೆ ಬಂದು ಹೇಳಿಕೆಗಳನ್ನು ನೀಡುವುದು ಅಧಿಕಾರಿಗಳಿಗೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು.
ಇಂತಹ ಅಧಿಕಾರಿಗಳ ವರ್ತನೆ ನಿಜಕ್ಕೂ ಸಹಿಸಲು ಸಾಧ್ಯವಿಲ್ಲ, ವೈಯಕ್ತಿಕ ವಿಚಾರ ಏನೇ ಇರಲಿ, ಅದನ್ನು ಬೀದಿ ರಂಪ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರೂ ಎಲ್ಲವನ್ನು ಗಮನಿಸುತ್ತಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.