ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿಂದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡುತ್ತಿವೆ. ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್ ಮೊದಲಾದ ದಿಗ್ಗಜ ಕಂಪನಿಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ.
ಹೀಗಾಗಿ ಭಾರತದ ಐಟಿ ಕಂಪನಿಗಳೂ ಸಹ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುವ ಆತಂಕ ವ್ಯಕ್ತವಾಗಿತ್ತು. ಈ ರೀತಿಯ ಆತಂಕದಲ್ಲಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಉದ್ಯೋಗಿಗಳಿಗೆ ಕಂಪನಿ ಗುಡ್ ನ್ಯೂಸ್ ನೀಡಿದೆ.
ಉದ್ಯೋಗಿಗಳನ್ನು ತೆಗೆದುಹಾಕುವ ಯಾವುದೇ ಆಲೋಚನೆ ಕಂಪನಿಗೆ ಇಲ್ಲ ಎಂದು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಂದ್ ಹೇಳಿದ್ದಾರೆ. ಅಲ್ಲದೆ ಅಮೆರಿಕಾದಲ್ಲಿ ಕೆಲಸ ಕಳೆದುಕೊಂಡಿರುವ ಭಾರತೀಯ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಕಂಪನಿ ಮುಕ್ತವಾಗಿದೆ ಎಂದು ಹೇಳುವ ಮೂಲಕ ಇತರೆ ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಂಡಿರುವವರಿಗೆ ಭರವಸೆ ಮೂಡಿಸಿದ್ದಾರೆ.