ಟಾಟಾ ಮೋಟಾರ್ಸ್ ಪ್ರಸ್ತುತ ದೇಶದಲ್ಲಿ ಅತಿದೊಡ್ಡ ಎಲೆಕ್ಟ್ರಿಕ್ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ವರ್ಷ ಈ ಕಂಪನಿಯು ತನ್ನ ಅಗ್ಗದ ಎಲೆಕ್ಟ್ರಿಕ್ ಕಾರು ಟಾಟಾ ಟಿಯಾಗೊ EV ಅನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಪಾವಧಿಯಲ್ಲಿಯೇ 20 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ. ಆದರೆ ಈಗ ಟಾಟಾ ಟಿಯಾಗೋಗೆ ಪೈಪೋಟಿ ಒಡ್ಡಲು ಫ್ರೆಂಚ್ ಕಾರು ತಯಾರಕ ಸಿಟ್ರೊಯೆನ್ ಸಜ್ಜಾಗಿದೆ.
ಎಲೆಕ್ಟ್ರಿಕ್ ಪ್ರೀಮಿಯಂ ಹ್ಯಾಚ್ಬ್ಯಾಕ್ ಸಿಟ್ರೊಯೆನ್ ಇಸಿ3 ಅನ್ನು ಈ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ಭಾರತದಲ್ಲಿ ಸಿಟ್ರೊಯೆನ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು. ಈ ಎಲೆಕ್ಟ್ರಿಕ್ ಕಾರಿನ ಬೆಲೆ 11.50 ಲಕ್ಷದಿಂದ 12.50 ಲಕ್ಷ ರೂಪಾಯಿವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಟಾಟಾ ಟಿಯಾಗೊ EV ಯೊಂದಿಗೆ ಸ್ಪರ್ಧಿಸುವುದರಲ್ಲಿ ಅನುಮಾನವೇ ಇಲ್ಲ. ಟಿಯಾಗೋ ಎಲೆಕ್ಟ್ರಿಕ್ ಕಾರಿನ ಬೆಲೆ 8.69 ಲಕ್ಷದಿಂದ 11.99 ಲಕ್ಷ ರೂಪಾಯಿವರೆಗಿದೆ.
Citroen eC3 ಕಂಪನಿಯ, ಪ್ರೀಮಿಯಂ ಹ್ಯಾಚ್ಬ್ಯಾಕ್ C3ಯ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಈ ಎಲೆಕ್ಟ್ರಿಕ್ ಕಾರು 29.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು 56 bhp ಮತ್ತು 143 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6.8 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗವನ್ನು ಸಾಧಿಸುತ್ತದೆ. Citroen eC3 ಒಂದೇ ಚಾರ್ಜ್ನಲ್ಲಿ 320 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. 15amp ಸಾಕೆಟ್ ಮೂಲಕ ಅದರ ಬ್ಯಾಟರಿಯನ್ನು 10 ರಿಂದ 100 ಪ್ರತಿಶತ ಚಾರ್ಜ್ ಮಾಡಲು 10.5 ಗಂಟೆಗಳು ಬೇಕು.
ನೋಟ ಮತ್ತು ವಿನ್ಯಾಸದಲ್ಲಿ ಇದು ಪೆಟ್ರೋಲ್ ಮಾದರಿಯನ್ನು ಹೋಲುತ್ತದೆ. ಕ್ಯಾಬಿನ್ ಕೂಡ ಪೆಟ್ರೋಲ್ ಕಾರಿನಂತೆಯೇ ಇದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸ್ವಲ್ಪ ವಿಭಿನ್ನವಾಗಿದೆ. ಎಲೆಕ್ಟ್ರಿಕ್ ಕಾರನ್ನು ಚಾಲನೆ ಮಾಡುವಾಗ ನಿಮಗೆ ಅಗತ್ಯವಿರುವ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡುತ್ತದೆ. ಚಾರ್ಜ್ ಸ್ಟೇಟಸ್, ಇನ್ನು ಎಷ್ಟು ಕಿಮೀ ಚಲಿಸಬಹುದೆಂಬ ವಿವರ ಇವೆಲ್ಲವೂ ದೊರೆಯಲಿದೆ. ಸಿಟ್ರೊಯೆನ್ ಇಂಡಿಯಾ ಈಗಾಗ್ಲೇ eC3 ಗಾಗಿ ಬುಕಿಂಗ್ಗಳನ್ನು ಸ್ವೀಕರಿಸುತ್ತಿದೆ.