ಬೆಂಗಳೂರು: ಮಹಿಳಾ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನಡುವೆ ವಾರ್ ನಡೆದಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು 19 ಆರೋಪ ಪಟ್ಟಿ ಮಾಡಿದ್ದಾರೆ.
ಶಾಸಕ ಸಾ.ರಾ. ಮಹೇಶ್ ಮತ್ತು ರೋಹಿಣಿ ಸಿಂಧೂರಿ ಸಂಧಾನ ಯತ್ನ ವಿಚಾರ ಬಹಿರಂಗವಾದ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಡಿ. ರೂಪಾ ಹೊಸ ಬಾಂಬ್ ಸಿಡಿಸಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ಆರೋಪ ಮಾಡಿದ್ದಾರೆ. ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದು ಹೇಳಿದ್ದು, ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳ ಪಟ್ಟಿ ನೀಡಿ ಪ್ರಶ್ನಿಸಿದ್ದಾರೆ.
ಐಎಎಸ್ ಅಧಿಕಾರಿ ಡಿ.ಕೆ. ರವಿ ಸಂಭಾವಿತ ವ್ಯಕ್ತಿಯಾಗಿದ್ದು, ಅವರು ಲಿಮಿಟ್ ಕ್ರಾಸ್ ಮಾಡಿದ ಕೂಡಲೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಆದರೆ, ಬ್ಲಾಕ್ ಮಾಡಲಿಲ್ಲ. ಅದು ಉತ್ತೇಜನ ಕೊಡುವ ರೀತಿ ಕಾಣಿಸುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.
ಮಂಡ್ಯ ಸಿಇಓ ಆದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಕಟ್ಟಿಸಿದ ಶೌಚಾಲಯಗಳಿಗಿಂತ ಹೆಚ್ಚು ಶೌಚಾಲಯ ನಿರ್ಮಾಣ ಮಾಡಿರುವುದಾಗಿ ತೋರಿಸಿ ಕೇಂದ್ರದ ಪ್ರಶಸ್ತಿ ತೆಗೆದುಕೊಂಡರು ಎಂಬ ಆರೋಪ ಕೇಳಿ ಬಂದರೂ ಅದರ ತನಿಖೆ ಆಗಲಿಲ್ಲ.
ಚಾಮರಾಜನಗರದ 24 ಜನ ಆಕ್ಸಿಜನ್ ಇಲ್ಲದೆ ಮೃತಪಟ್ಟ ಸಂದರ್ಭದಲ್ಲಿ ಹೇಗೋ ಪಾರಾದರು. ಕನ್ನಡದ ಹುಡುಗಿ ಶಿಲ್ಪಾ ನಾಗ್ ಜೊತೆ ಜಗಳ ರಂಪ ಮಾಡಿದರು. ಅದು ಕೋಳಿ ಜಗಳವಾಗಿತ್ತೇ ವಿನಹ ಮೌಲ್ಯಾಧಾರಿತ, ವಿಷಯಾಧಾರಿತ ಜಗಳವಾಗಿರಲಿಲ್ಲ.
ಐಎಎಸ್ ಅಧಿಕಾರಿಗಳಾದ ಹರ್ಷ ಗುಪ್ತ, ಮಣಿವಣ್ಣನ್ ಜೊತೆಗೆ ಜಗಳವಾಡಿದ್ದಾರೆ. ಶಾಸಕ ಸಾ.ರಾ. ಮಹೇಶ್ ಅವರ ಮೇಲೆ ಅನೇಕ ಆಪಾದನೆ ಮಾಡಿದರೂ ಒಂದನ್ನೂ ಸಾಬೀತುಪಡಿಸಲಿಲ್ಲ. ಅದಕ್ಕೆ ಸಂಧಾನಕ್ಕೆ ಹೋದರಾ ಎಂದು ಪ್ರಶ್ನಿಸಿದ್ದಾರೆ.