ಸಾಲ ನೀಡುವ ಆಪ್ ಗಳ ಕುರಿತು ಈಗಾಗಲೇ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಸಾಲ ನೀಡುವ ಇವರುಗಳು ಬಳಿಕ ಎರಡರಿಂದ ಮೂರರಷ್ಟು ಹೆಚ್ಚು ಮರುಪಾವತಿಗೆ ಒತ್ತಾಯಿಸುತ್ತಾರಲ್ಲದೆ ಒಂದು ವೇಳೆ ಇದಕ್ಕೆ ನಿರಾಕರಿಸಿದರೆ ಮಾರ್ಫ್ ಮಾಡಿದ ಅಶ್ಲೀಲ ಫೋಟೋಗಳನ್ನು ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸುತ್ತಾರೆ.
ಇದೀಗ ವಾಣಿಜ್ಯ ನಗರಿ ಮುಂಬೈನಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಆರ್ಕಿಟೆಕ್ಚರ್ ವ್ಯಾಸಂಗ ಮಾಡುತ್ತಿದ್ದ 31 ವರ್ಷದ ವಿದ್ಯಾರ್ಥಿನಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸಾಲ ನೀಡುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದರು. ಅಚ್ಚರಿಯ ಸಂಗತಿ ಎಂದರೆ ಅವರು ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದರೆ ಹೊರತು ಸಾಲಕ್ಕೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ.
ಆದರೆ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ಸಂದರ್ಭದಲ್ಲಿ ಅವರ ಎಲ್ಲ ಕಂಡಿಷನ್ ಗಳಿಗೂ ಓಕೆ ಎಂದು ಕೊಟ್ಟಿದ್ದೆ ತಪ್ಪಾಗಿತ್ತು. ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ಮರುಕ್ಷಣವೇ ಇವರ ಬ್ಯಾಂಕ್ ಖಾತೆಗೆ 2,400 ರೂಪಾಯಿಗಳನ್ನು ಕ್ರೆಡಿಟ್ ಮಾಡಲಾಗಿತ್ತು. ನಂತರ 8 ವಿವಿಧ ನಂಬರ್ ಗಳಿಂದ ಆಕೆಗೆ ಕರೆ ಬಂದಿದ್ದು ಬ್ಯಾಂಕ್ ಖಾತೆ ವಿವರ ಪಡೆದುಕೊಂಡಿದ್ದರು.
ಬಳಿಕ ಹಂತ ಹಂತವಾಗಿ ಮಹಿಳೆಯ ಖಾತೆಗೆ ಹಣವನ್ನು ಹಾಕಲಾಗಿದ್ದು ಜನವರಿ 28ರ ವೇಳೆಗೆ ಇದರ ಮೊತ್ತ 1.5 ಲಕ್ಷಗಳಾಗಿತ್ತು. ಫೆಬ್ರವರಿ 4ರಿಂದ ಆಕೆಗೆ ಕರೆ ಮಾಡಲು ಆರಂಭಿಸಿದ ಅಪರಿಚಿತರು 3 ಲಕ್ಷ ರೂಪಾಯಿಗಳನ್ನು ಮರು ಪಾವತಿಸದಿದ್ದರೆ ಅಶ್ಲೀಲ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಇದೀಗ ಆಕೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.