ಕೊರೊನಾದ ಆರ್ಭಟ ಕೊಂಚ ತಣ್ಣಗಾಗುತ್ತಿದ್ದಂತೆ ಹೊಸ ವೈರಸ್ ಒಂದು ಭೀತಿ ಹುಟ್ಟಿಸಿದೆ. ಆಫ್ರಿಕಾದ ಈಕ್ವಟೋರಿಯಲ್ ಗಿನಿಯಾದಲ್ಲಿ ಮೊದಲ ಬಾರಿಗೆ ಮಾರ್ಬರ್ಗ್ ಕಾಯಿಲೆ ಕಾಣಿಸಿಕೊಂಡಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಪಶ್ಚಿಮ ಆಫ್ರಿಕಾದಲ್ಲಿ ಮಾರ್ಬರ್ಗ್ ವೈರಸ್‌ನಿಂದ 9 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು WHO ಹೇಳಿದೆ. ಈಕ್ವಟೋರಿಯಲ್ ಗಿನಿಯಾದ ಮಾದರಿಗಳನ್ನು ಸೆನೆಗಲ್‌ನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ WHO ಸಾಂಕ್ರಾಮಿಕ ರೋಗವನ್ನು ದೃಢಪಡಿಸಿದೆ.
ಆಫ್ರಿಕಾದ WHO ಪ್ರಾದೇಶಿಕ ನಿರ್ದೇಶಕ ಡಾ ಮತ್ಶಿಡಿಸೊ ಮೊಯೆಟಿ ಹೇಳುವ ಪ್ರಕಾರ, ಮಾರ್ಬರ್ಗ್ ಹೆಚ್ಚು ಸಾಂಕ್ರಾಮಿಕವಾಗಿದೆ. ಈಕ್ವಟೋರಿಯಲ್ ಗಿನಿಯಾದಲ್ಲಿ ಅಧಿಕಾರಿಗಳು ರೋಗವನ್ನು ದೃಢೀಕರಿಸುವಲ್ಲಿ ತೆಗೆದುಕೊಂಡ ತ್ವರಿತ ಮತ್ತು ನಿರ್ಣಾಯಕ ಕ್ರಮಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ. ತುರ್ತು ಪ್ರತಿಕ್ರಿಯೆಯನ್ನು ತ್ವರಿತವಾಗಿ ಹೆಚ್ಚಿಸಲಾಗುವುದು. ವೈರಸ್ ಹರಡದಂತೆ ತಡೆಯುವುದಾಗಿಯೂ ಭರವಸೆ ನೀಡಿದ್ದಾರೆ.ಇದು ಸಾಂಕ್ರಾಮಿಕ ವೈರಸ್ ಆಗಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಅದರ ಲಕ್ಷಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಏನಿದು ಮಾರ್ಬರ್ಗ್ ವೈರಸ್?
ಮಾರ್ಬರ್ಗ್ ವೈರಸ್ ರೋಗವು ಹೆಮರಾಜಿಕ್ ಜ್ವರವನ್ನು ಉಂಟುಮಾಡುವ ಅತ್ಯಂತ ಅಪಾಯಕಾರಿ ಕಾಯಿಲೆ. ಇದರಲ್ಲಿ ಮರಣ ಪ್ರಮಾಣವು ಶೇ.88ರಷ್ಟಿರುತ್ತದೆ. ಇದು ಎಬೋಲಾ ವೈರಸ್ ಕಾಯಿಲೆಗೆ ಕಾರಣವಾಗುವ ಒಂದೇ ಕುಟುಂಬದ ವೈರಸ್ ಆಗಿದೆ.
ಮಾರ್ಬರ್ಗ್ ರೋಗ ಹೇಗೆ ಹರಡುತ್ತದೆ?
ಮಾರ್ಬರ್ಗ್ ವೈರಸ್ ಬಾವಲಿಗಳಲ್ಲಿ ಮೊದಲು ಹುಟ್ಟಿಕೊಂಡಿತು. ಸೋಂಕಿತರ ದೈಹಿಕ ದ್ರವಗಳು ಅಥವಾ ಕಲುಷಿತ ಬೆಡ್ ಶೀಟ್‌ಗಳಂತಹ ಮೇಲ್ಮೈಗಳ ನಿಕಟ ಸಂಪರ್ಕದ ಮೂಲಕ ಜನರಲ್ಲಿ ಹರಡುತ್ತದೆ.
ಮಾರ್ಬರ್ಗ್ ಕಾಯಿಲೆಯ ಲಕ್ಷಣಗಳು
ಮಾರ್ಬರ್ಗ್ ವೈರಸ್‌ನಿಂದ ಉಂಟಾಗುವ ರೋಗವು ತೀವ್ರ ಜ್ವರ, ತೀವ್ರ ತಲೆನೋವು ಮತ್ತು ತೀವ್ರ ಅಸ್ವಸ್ಥತೆಯೊಂದಿಗೆ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ. ಅನೇಕ ರೋಗಿಗಳು ಏಳು ದಿನಗಳಲ್ಲಿ ತೀವ್ರವಾದ ಹೆಮರಾಜಿಕ್ ರೋಗಲಕ್ಷಣಗಳನ್ನು ಹೊಂದುತ್ತಾರೆ.
ಮಾರ್ಬರ್ಗ್ ಕಾಯಿಲೆಗೆ ಚಿಕಿತ್ಸೆ ನೀಡಲು ಲಸಿಕೆ ಇದೆಯೇ?
ಮಾರ್ಬರ್ಗ್‌ಗೆ ಚಿಕಿತ್ಸೆ ನೀಡಲು ಯಾವುದೇ ಅಧಿಕೃತ ಲಸಿಕೆಗಳು ಅಥವಾ ಔಷಧಿಗಳಿಲ್ಲ. ಆದರೆ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಪುನರ್ಜಲೀಕರಣ ಚಿಕಿತ್ಸೆ ನೀಡಲಾಗುತ್ತದೆ. ಇದು ರೋಗಿಯ ಬದುಕುಳಿಯುವ ಸಾಧ್ಯತೆಗಳನ್ನು ಸುಧಾರಿಸಬಹುದು.ಮಾರ್ಬರ್ಗ್ ಕಾಯಿಲೆ ಮೊದಲು 1967 ರಲ್ಲಿ ಜರ್ಮನಿ, ಬೆಲ್‌ಗ್ರೇಡ್ ಮತ್ತು ಸೆರ್ಬಿಯಾದಲ್ಲಿ ಕಾಣಿಸಿಕೊಂಡಿತ್ತು. ಅಂಗೋಲಾದಲ್ಲಿ 2004 ರಲ್ಲಿ ಏಕಾಏಕಿ 252 ಜನರಲ್ಲಿ ಮಾರ್ಬರ್ಗ್ ಸೋಂಕು ಪತ್ತೆಯಾಗಿತ್ತು, ಈ ಪೈಕಿ 90 ಪ್ರತಿಶತ ರೋಗಿಗಳು ಸಾವನ್ನಪ್ಪಿದ್ದರು. ಕಳೆದ ವರ್ಷ ಘಾನಾದಲ್ಲಿ ಮಾರ್ಬರ್ಗ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ.