ವಿರಾಜಪೇಟೆ: ಸಕಾಲಕ್ಕೆ ಸೇವೆ ಸಿಗದೆ ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿ ಶಿಶುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಗುಹ್ಯ ಗ್ರಾಮದ ನಿವಾಸಿ ಸುಬ್ರಮಣಿ ಕಾಫಿ ತೋಟದ ಲೈನ್ ಮನೆಯ ಕಾರ್ಮಿಕ ಮಹಿಳೆ ಸಂಗೀತಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬೆಳಗ್ಗೆ 6 ಗಂಟೆಗೆ ಆರೋಗ್ಯ ಕೇಂದ್ರಕ್ಕೆ ಅವರನ್ನು ಕರೆದುಕೊಂಡು ಬಂದಾಗ ಕೇಂದ್ರದ ಬಾಗಿಲು ಮುಚ್ಚಿತ್ತು, ಬಾಗಿಲು ಬಡಿದರು ಯಾರೂ ತೆಗೆದಿಲ್ಲ. ಸಿಬ್ಬಂದಿ ಇಲ್ಲದೆ ಸೌಲಭ್ಯವೂ ಸಿಗದೇ ಆರೋಗ್ಯ ಕೇಂದ್ರದ ಆವರಣದಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದಾರೆ.
ಅರ್ಧ ಗಂಟೆ ನಂತರ ಆರೋಗ್ಯ ಕೇಂದ್ರದ ಹಿಂಬಾಗಿಲಿನಿಂದ ಹೋದಾಗ ಕಾವಲುಗಾರ ಸಿಕ್ಕಿದ್ದಾರೆ. ಅವರಿಗೆ ಮಾಹಿತಿ ನೀಡಿ ಸಿಬ್ಬಂದಿ ಕರೆಸಲು ಕೋರಿದರೂ ಸ್ಪಂದಿಸಿಲ್ಲ. ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ ಆಗಿದ್ದು, ರಕ್ತದ ಮಡುವಿನಲ್ಲಿದ್ದ ತಾಯಿ, ಶಿಶುವನ್ನು ನಂತರ ಆರೋಗ್ಯ ಕೇಂದ್ರದ ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ.
ರಾತ್ರಿ ವೇಳೆ ಆರೋಗ್ಯ ಕೇಂದ್ರದ ಮುಂದಿನ ಬಾಗಿಲು ಮುಚ್ಚಿರುತ್ತದೆ. ಹಿಂದಿನ ಬಾಗಿಲು ತೆರೆದಿರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲದೆ ಗೊಂದಲವಾಗಿದ್ದು, ಹೆರಿಗೆ ನಂತರ ಆಸ್ಪತ್ರೆ ಸಿಬ್ಬಂದಿ ತಾಯಿ, ಶಶಿವನ್ನು ಆರೈಕೆ ಮಾಡಿದ್ದಾರೆ. ಈ ಬಗ್ಗೆ ಡಿಹೆಚ್ಒ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ವಿರಾಜಪೇಟೆ ತಾಲೂಕು ವೈದ್ಯಾಧಿಕಾರಿ ಹೇಳಿದ್ದಾರೆ.