ಪ್ರೀತಿಯ ತಿಂಗಳು ಫೆಬ್ರವರಿ ಶುರುವಾಗಿದೆ. ಪ್ರೇಮಿಗಳ ದಿನಕ್ಕೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಪ್ರೇಮಿಗಳ ದಿನಕ್ಕಿಂತ ಮೊದಲು ಅದಕ್ಕೆ ಸಂಬಂಧಿಸಿದ ಅನೇಕ ದಿನಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅದ್ರಲ್ಲಿ ‘ರೋಸ್ ಡೇ’ ಕೂಡ ಒಂದು.
ವಾಲೆಂಟೈನ್ಸ್ ವೀಕ್ ಆರಂಭದ ದಿನವನ್ನು ಅಂದರೆ ಫೆ. 07 ರೋಸ್ ಡೇ ಎಂದು ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳು, ಸ್ನೇಹಿತರು ತಮ್ಮವರಿಗೆ ಬೇರೆ ಬೇರೆ ಬಣ್ಣದ ಗುಲಾಬಿ ಹೂ ನೀಡಿ ಪರಸ್ಪರ ಸಂತೋಷ ಹಂಚಿಕೊಳ್ತಾರೆ.
ಎಲ್ಲರ ಮನ ಸೆಳೆಯುವ ಗುಲಾಬಿ ಅನೇಕ ಬಣ್ಣಗಳನ್ನು ಹೊಂದಿದೆ. ಒಂದೊಂದು ಬಣ್ಣದ ಗುಲಾಬಿ ‘ಹೂ’ಗೂ ಒಂದೊಂದು ಸಂಕೇತವಿದೆ.
ಕೆಂಪು ಗುಲಾಬಿ ಪ್ರೀತಿಯ ಸಂಕೇತ. ಹಾಗಾಗಿಯೇ ಪ್ರೇಮ ನಿವೇದನೆ ಮಾಡಲು ಕೆಂಪು ಗುಲಾಬಿ ಬಳಸುತ್ತಾರೆ. ಪ್ರೇಮಿಗಳ ದಿನಕ್ಕೂ ಮುನ್ನ ರೋಸ್ ಡೇಯಂದು ನೀವು ಪ್ರೀತಿಸುವ ವ್ಯಕ್ತಿಗೆ ಕೆಂಪು ಗುಲಾಬಿ ನೀಡಿ ಮೊದಲೇ ನಿಮ್ಮ ಭಾವನೆಯನ್ನು ಅವ್ರ ಮುಂದಿಡಿ.
ರೋಸ್ ಡೇ ಕೇವಲ ಪ್ರೇಮಿಗಳಿಗೆ ಸೀಮಿತವಲ್ಲ. ಸ್ನೇಹಕ್ಕೂ ಇದು ಒಳ್ಳೆ ದಿನ. ಹೊಸ ಸ್ನೇಹ ಬಯಸುವವರು ಹಳದಿ ಬಣ್ಣದ ಹೂವನ್ನು ನೀಡಿ ಸ್ನೇಹಕ್ಕೆ ಅಡಿಪಾಯ ಹಾಕಿ.
ಶಾಂತಿಯ ಸಂಕೇತ ಬಿಳಿ. ರೋಸ್ ಡೇ ಕ್ಷಮೆ ಯಾಚನೆಗೂ ಅವಕಾಶ ನೀಡುತ್ತದೆ. ಯಾರಿಗಾದ್ರೂ ಕ್ಷಮೆ ಕೇಳಬೇಕೆಂದಿದ್ದರೆ ಬಿಳಿ ಬಣ್ಣದ ಹೂವನ್ನು ನೀಡಿ ಕ್ಷಮೆ ಕೇಳಿ. ಇನ್ನು ಧನ್ಯವಾದ ಹೇಳಲು ಬಯಸಿದ್ರೆ ಗುಲಾಬಿ ಬಣ್ಣದ ಹೂವನ್ನು ನಿಮ್ಮ ಆಪ್ತರಿಗೆ ನೀಡಿ.