ಯಾದಗಿರಿ: ರಾಜ್ಯದ 540 ವಸತಿ ಶಾಲೆಗಳಲ್ಲಿ ಈ ಬಾರಿ ಕಾಲೇಜು ಶಿಕ್ಷಣ ಪ್ರಾರಂಭಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆ ಕೆಂಭಾವಿಯ ಮುದನೂರಿನಲ್ಲಿ 24.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಮೊಟ್ಟಮೊದಲ ಬಾರಿಗೆ ವಸತಿ ಶಾಲೆಗಳಲ್ಲಿ ಗ್ರಾಮೀಣ ಮಟ್ಟದ ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಂಬೇಡ್ಕರ್ ಅವರ ಕನಸು ನನಸಾಗಲು ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣವೇ ಮಾನವ ಅಭಿವೃದ್ಧಿಯ ಶಕ್ತಿ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 830 ವಸತಿ ಶಾಲೆಗಳಿದ್ದು, ಹತ್ತನೇ ತರಗತಿಯಲ್ಲಿ ಶೇಕಡ 99.5 ರಷ್ಟು ಸಾಧನೆ ಮಾಡಿರುವವರು ಸರ್ಕಾರದ ಇಂತಹ ವಸತಿ ಶಾಲೆಗಳ ಮಕ್ಕಳಾಗಿದ್ದಾರೆ. ರಾಜ್ಯದಲ್ಲಿ ಈ ಬಾರಿ 540 ವಸತಿ ಶಾಲೆಗಳಲ್ಲಿ ಕಾಲೇಜು ಶಿಕ್ಷಣ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.