ಚಿಕ್ಕಮಗಳೂರು: ಮಹಿಳೆಯರು ಬೈಕ್ ಮೇಲೆ ಕೂರುವಾಗ ಹುಷಾರಾಗಿ ಕೂತುಕೊಳ್ಳಬೇಕು. ಅದರಲ್ಲೂ ಸೀರೆ ಅಥವಾ ಚೂಡಿದಾರ್ ಹಾಕಿದಾಗಂತೂ ಎಚ್ಚರದಿಂದಲೇ ಇರಬೇಕಾಗುತ್ತದೆ. ಇಲ್ಲ ಅಂದರೆ ಸೀರೆ ಸೆರಗು ಅಥವಾ ದುಪ್ಪಟ್ಟ ಚಕ್ರಕ್ಕೆ ಸಿಕ್ಕಾಕಿಕೊಂಡರೆ ಮುಗೀತು, ಪ್ರಾಣಕ್ಕೆ ಸಂಚಕಾರ ಆಗೋದು ಗ್ಯಾರಂಟಿ. ಇದೀಗ ಇಂಥದ್ದೇ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಹೌದು, ಚಿಕ್ಕಮಗಳೂರಿನ ತರೀಕೆರೆ ಪಟ್ಟಣ ಸಮೀಪದ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಎಂಬ ಮಹಿಳೆ ಬೈಕಿನಲ್ಲಿ ಬರುವಾಗ ಈ ಘಟನೆ ನಡೆದಿದೆ. ತರೀಕೆರೆ ಪಟ್ಟಣಕ್ಕೆ ಬರುವಾಗ ಬೈಕಿನ ಹಿಂದೆ ಕೂತಿದ್ದ ಮಹಿಳೆಯ ಸೀರೆ ಸೆರಗು ಹಾಗೂ ನೆರಿಗೆ ಬೈಕಿನ ಚಕ್ರಕ್ಕೆ ಸಿಲುಕಿ ಹಾಕಿಕೊಂಡಿದೆ. ಈ ವೇಳೆ ಬೈಕಿಗೆ ಕಾಲು ಕೂಡ ಸಿಲುಕಿಕೊಂಡಿದೆ. ನಂತರ ಮಹಿಳೆ ಕಿರುಚಿಕೊಂಡಿದ್ದಾರೆ. ತಕ್ಷಣವೇ ಬೈಕ್ ಸವಾರ ಹಾಗೂ ಮಹಿಳೆ ಕೆಳಕ್ಕೆ ಬಿದ್ದಿದ್ದಾರೆ.
ಈ ವೇಳೆ ಮಹಿಳೆ ಕಾಲು ನೋವಿನಿಂದ ಸುಮಾರು ಹೊತ್ತು ನರಳಾಡಿದ್ದಾರೆ. ಮಹಿಳೆಯ ಕಾಲು ಗೇರ್ ಬಾಕ್ಸ್ ಮೂಲಕ ಚಕ್ರದ ಒಳಗೆ ಸಿಲುಕಿಕೊಂಡಿತ್ತು. ಬಳಿಕ ಬೈಕಿನ ಚೈನ್ ಕಟ್ ಮಾಡಿ, ಗೇರ್ ಬಾಕ್ಸ್ ಬಿಚ್ಚಿ ಮಹಿಳೆಯ ಕಾಲನ್ನು ಹೊರ ತೆಗೆದಿದ್ದಾರೆ. ಅಷ್ಟೊತ್ತಿಗಾಗಲೇ ಮಹಿಳೆ ಕಾಲಿಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ.