ಮುಂಬೈ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಮಂಗಳವಾರ ಪಕ್ಷದ ರಾಜ್ಯಾಧ್ಯಕ್ಷ ನಾನಾ ಪಟೋಲೆ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಸಿಎಲ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾದಂತಾಗಿದೆ. ಪಟೋಲೆ ವಿರುದ್ಧ ಥೋರಟ್ ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಲೆ, ಥೋರಟ್ ಅವರು ಅಂತಹ ಯಾವುದೇ ಪತ್ರವನ್ನು ಬರೆದಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಮ್ಮೊಂದಿಗೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ಥೋರಟ್ ತಿಳಿಸಿದ್ದಾರೆನ್ನಲಾಗಿದೆ.
ಎಂಎಲ್‌ಸಿ ಚುನಾವಣೆ ವೇಳೆ ಒಳಜಗಳ ಶುರುವಾಗಿದೆ. ಥೋರಟ್ ಅವರ ಸೋದರ ಮಾವ ನಾಸಿಕ್ ಪದವೀಧರ ಕ್ಷೇತ್ರದ ಎಂಎಲ್‌ಸಿ ಸುಧೀರ್ ತಾಂಬೆ ಅವರು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದರೂ ಸ್ಪರ್ಧಿಸಲು ನಿರಾಕರಿಸಿದರು. ಅವರ ಮಗ ಸತ್ಯಜಿತ್ ತಾಂಬೆಯನ್ನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಮಾಡಿದ್ದು, ಅವರು ಗೆದ್ದಿದ್ದಾರೆ.
ಸಂಬಂಧಿಗಳಾದ ತಾಂಬೆ ತಂದೆ-ಮಗ ಜೋಡಿಗೆ ಥೋರಟ್ ಅವರು ಪರೋಕ್ಷವಾಗಿ ಬೆಂಬಲ ನೀಡಿದ್ದರೆಂದು ಹೇಳಲಾಗಿದೆ. ಚುನಾವಣೆಯ ಪೂರ್ವದಲ್ಲಿ ಸತ್ಯಜಿತ್ ತಾಂಬೆ ಅವರ ಪ್ರಚಾರದಲ್ಲಿ ಥೋರಟ್ ಭಾಗವಹಿಸದಿದ್ದರೂ, ಅವರ ಹಲವಾರು ಸಂಬಂಧಿಕರು ಉಪಸ್ಥಿತರಿದ್ದರು. ಎಂಎಲ್‌ಸಿ ಚುನಾವಣೆಯ ಟ್ವಿಸ್ಟ್ ಗಾಗಿ ಕಾಂಗ್ರೆಸ್ ಸುಧೀರ್ ತಾಂಬೆ ಮತ್ತು ಸತ್ಯಜಿತ್ ತಾಂಬೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಪಕ್ಷವು ಅಧಿಕೃತವಾಗಿ ಬೆಂಬಲ ನೀಡಿದ ಅಭ್ಯರ್ಥಿಯ ಬದಲಿಗೆ ಸತ್ಯಜಿತ್ ತಾಂಬೆ ಪರ ಪ್ರಚಾರ ಮಾಡಿದ್ದಾರೆ ಎಂಬ ಕಾರಣಕ್ಕೆ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅಹ್ಮದ್ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಪಟೋಲೆ ವಿಸರ್ಜಿಸಿದ್ದರು.
ಪಕ್ಷದ ರಾಜ್ಯ ನಾಯಕತ್ವದಿಂದ ತಮಗೆ ಅವಮಾನವಾಗಿ ಎಂದು ಥೋರಟ್ ಅವರು ಖರ್ಗೆ ಅವರಿಗೆ ಪತ್ರ ಬರೆದು ದೂರಿದ್ದಾರೆ. ಫೆಬ್ರವರಿ 13 ರಂದು ಕಾಂಗ್ರೆಸ್‌ನ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪಟೋಲೆ ಹೇಳಿದ್ದಾರೆ.