ನೀವು ನಾಯಿ ಪೋಷಕರಾಗಿದ್ದರೆ, ಇವುಗಳು ಕಾರಿನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಇಷ್ಟಪಡುವುದು ಎಂಬುದು ನಿಮಗೆ ತಿಳಿದಿರಬಹುದು. ನಾಲಿಗೆಯನ್ನು ಹೊರಚಾಚುತ್ತಾ ಅದು ತಂಗಾಳಿಯನ್ನು ಆನಂದಿಸುತ್ತದೆ. ಸಹಜವಾಗಿ, ಸಾಕುಪ್ರಾಣಿ ಮಾಲೀಕರು ತಮ್ಮ ಈ ಸ್ನೇಹಿತನಿಗೆ ಉತ್ತಮವಾದದ್ದನ್ನು ನೀಡಲು ಬಯಸುತ್ತಾರೆ. ಆದಾಗ್ಯೂ, ಮಿತಿಮೀರಿ ಹೋಗುವಂತಹ ವಿಷಯಗಳೂ ಕೆಲವೊಮ್ಮೆ ಕಂಡುಬರುತ್ತದೆ.
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಾಕುಪ್ರಾಣಿಗಳ ಸಂತೋಷಕ್ಕೆ ಸ್ವಲ್ಪ ವಿಪರೀತ ಎನ್ನುವಷ್ಟರ ಮಟ್ಟಿಗೆ ಹೋಗಿದ್ದಾರೆ. ಈ ವ್ಯಕ್ತಿಯು ನಾಯಿಯನ್ನು ಕಾರಿನ ಮೇಲ್ಛಾವಣಿಯ ಮೇಲೆ ಕೂರಿಸಿಕೊಂಡು ಚಾಲನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವಾರು ಮಂದಿ ರಸ್ತೆ ಸುರಕ್ಷತೆ ಮತ್ತು ಪ್ರಾಣಿ ಹಿಂಸೆಯನ್ನು ಪ್ರಶ್ನಿಸಿದ್ದಾರೆ.
Forever Bengaluru ಎಂಬ ಟ್ವಿಟರ್ ಹ್ಯಾಂಡಲ್ ಆನ್‌ಲೈನ್‌ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುವ ವಾಹನದ ಛಾವಣಿಯ ಮೇಲೆ ಕಂದು ಬಣ್ಣದ ಕಾಲರ್ ಧರಿಸಿರುವ ನಾಯಿಯನ್ನು ನೋಡಬಹುದು. ಕಾರಿನ ಹಿಂದಿನ ವಾಹನದಿಂದ ವ್ಯಕ್ತಿಯೊಬ್ಬರು ಈ ದೃಶ್ಯಾವಳಿಗಳನ್ನು ದಾಖಲಿಸಿದ್ದಾರೆ.
ನಾಯಿ ಕಾರಿನ ಮೇಲ್ಭಾಗದಲ್ಲಿ ನಿಂತಿರುವುದನ್ನು ತೋರಿಸುವ ಮೂಲಕ ವೀಡಿಯೊ ಆರಂಭವಾಗುತ್ತದೆ. ವಾಹನವು ಕಾರನ್ನು ಹಿಂದಿಕ್ಕುತ್ತಿದ್ದಂತೆ, ಒಬ್ಬ ವ್ಯಕ್ತಿ ಮಾತ್ರ ಕಾರಿನೊಳಗೆ ಕುಳಿತಿರುವುದನ್ನು ಕಾಣಬಹುದು. ಇದರ ಬಗ್ಗೆ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.