ಗಾಜಿಯಾಬಾದ್: ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಶಿಪ್ರಾ ಕಟ್ ಪ್ರದೇಶದಲ್ಲಿ ಕಾರು ಚಾಲಕನೊಬ್ಬ ಟ್ರಾಫಿಕ್ ಪೊಲೀಸ್ ಒಬ್ಬರಿಗೆ ಡಿಕ್ಕಿ ಹೊಡೆಯಿಸಿ ಬಾನೆಟ್ ಮೇಲೆ ಕಿಲೋಮೀಟರ್ ಗಟ್ಟಲೆ ಎಳೆದೊಯ್ದಿದ್ದಾನೆ.
ಚಾಲಕ ಸೀಟ್ ಬೆಲ್ಟ್ ಧರಿಸದ ಕಾರಣ ಟ್ರಾಫಿಕ್ ಪೊಲೀಸ್ ಒಬ್ಬರು ಕಾರನ್ನು ತಡೆದಿದ್ದರು. ಈ ಕಾರಿನಲ್ಲಿ ಮೂವರು ಯುವಕರು ಇದ್ದರು.
ಪೊಲೀಸರು ಕಾರನ್ನು ತಡೆದಿದ್ದರಿಂದ ಯುವಕ ವೇಗದಲ್ಲಿ ಕಾರು ಓಡಿಸಿದ. ಗಾಜಿಯಾಬಾದ್ ಟ್ರಾಫಿಕ್ ಪೋಲೀಸ್ ಅಂಕಿತ್ ಯಾದವ್ ಅವರು ಚೆಕ್ ಪಾಯಿಂಟ್ ಬಳಿ ವೇಗವಾಗಿ ಕಾರೊಂದು ಬರುತ್ತಿರುವುದನ್ನು ಕಂಡು ಚಾಲಕನಿಗೆ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು.
ಆಗಲೂ ಯುವಕ ನಿಲ್ಲಿಸದೇ ಕಾರಿನ ವೇಗ ಮತ್ತಷ್ಟು ಹೆಚ್ಚಿಸಿದ. ಈ ವೇಳೆ ಅಲ್ಲಿ ನಿಂತಿದ್ದ ಅಂಕಿತ್ ಅವರಿಗೆ ಕಾರನ್ನು ಯುವಕ ಡಿಕ್ಕಿ ಹೊಡೆಸಿದ್ದಾನೆ. ಆ ಸಂದರ್ಭದಲ್ಲಿ ಯಾದವ್ ಅವರು ಕಾರಿನ ಬಾನೆಟ್ ನಲ್ಲಿ ಸಿಲುಕಿಕೊಂಡರು. ಅವರು ಕಾರನ್ನು ನಿಲ್ಲಿಸುವಂತೆ ಮತ್ತು ಸಹಾಯಕ್ಕಾಗಿ ಕೂಗುತ್ತಲೇ ಇದ್ದರೂ ವೇಗವಾಗಿ ಯುವಕ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ.
2 ಕಿಲೋಮೀಟರ್ ಹೋದ ಮೇಲೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಕೆಳಗೆ ಬಿದ್ದು, ಕಾರಿನಡಿ ಸಿಲುಕಿಕೊಂಡ. ಜನರು ಜಮಾಯಿಸಿದ್ದರಿಂದ ಕಾರನ್ನು ಯುವಕ ನಿಲ್ಲಿಸಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸರು ಇಬ್ಬರು ಯುವಕರನ್ನು ಹಿಡಿದಿದ್ದು, ಒಬ್ಬ ತಪ್ಪಿಸಿಕೊಂಡಿದ್ದಾನೆ. ಇವರ ವಿರುದ್ಧ ಕೊಲೆ ಪ್ರಯತ್ನ ಕೇಸ್ ದಾಖಲು ಮಾಡಲಾಗಿದೆ. ಅಂಕಿತ್ ಯಾದವ್ ಅವರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.