ಶಾರ್ಕ್ ಟ್ಯಾಂಕ್ ಖ್ಯಾತಿಯ ಅಮನ್ ಗುಪ್ತಾ, ಬೋಟ್ನ (‘BoAt’) ಸಹ-ಸಂಸ್ಥಾಪಕ ಮತ್ತು ಸಿಎಮ್ಒ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಕಂಪೆನಿಯ ಬ್ರ್ಯಾಂಡಿಂಗ್ ಮಾಡುವಲ್ಲಿ ಅವರದ್ದು ಎತ್ತಿದ ಕೈ. ಮಕ್ಕಳು ಬಿ ಫಾರ್ ಬ್ಯಾಟ್ ಬದಲು ಬಿ ಫಾರ್ ಬೋಟ್ ಎಂದು ತಮ್ಮ ಕಂಪೆನಿಯ ಬ್ರ್ಯಾಂಡಿಂಗ್ ಮಾಡಬೇಕು ಎನ್ನುವುದು ಅವರ ಆಸೆ.
ಇದೀಗ ಅಮನ್ ಗುಪ್ತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗುವೊಂದರ ಉತ್ತರ ಪತ್ರಿಕೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮಗುವಿನ ಉತ್ತರಕ್ಕೆ ಅವರು ಭಾವುಕರಾಗಿದ್ದಾರೆ.
ಇಲ್ಲಿ ಕಾಣುವ ಉತ್ತರ ಪತ್ರಿಕೆಯಲ್ಲಿ ವಾಕ್ಯವನ್ನು ನಿರ್ಮಿಸುವ ಪ್ರಶ್ನೆ ಇತ್ತು. ಅದರಲ್ಲಿ ಬಾಲಕನೊಬ್ಬ “ಬೋಟ್” ಪದದ ವಾಕ್ಯ ಮಾಡುವಾಗ, “boAt ಅಮನ್ ಗುಪ್ತಾ ಅವರ ಹೆಡ್ಫೋನ್ಗಳ ಬ್ರ್ಯಾಂಡ್” ಎಂದು ಬರೆದಿದ್ದಾನೆ.
ಇದನ್ನು ನೋಡಿ ಅಮನ್ ಅವರಿಗೆ ತೀರಾ ಖುಷಿಯಾಗಿದೆ. ಉತ್ತರ ಪತ್ರಿಕೆಯನ್ನು ಮಗುವಿನ ತಂದೆ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದರು, “ನನ್ನ ಮಗ ಅನ್ವೇಯ ಉತ್ತರ ಪತ್ರಿಕೆ ಇದು. ಶಾರ್ಕ್ ಟ್ಯಾಂಕ್ನ ಪರಿಣಾಮಗಳ ನಂತರ ಬೋಟ್ ಪದಕ್ಕೆ ಈ ರೀತಿ ಬರೆದಿದ್ದಾನೆ” ಎಂದಿದ್ದರು. ಅದನ್ನು ಅಮನ್ ಅವರು ರೀ ಶೇರ್ ಮಾಡಿದ್ದು, ಮಗುವನ್ನು ಶ್ಲಾಘಿಸಿದ್ದಾರೆ.