ಹೊಸ ವರ್ಷಾಚರಣೆಯಂದು ದೆಹಲಿಯಲ್ಲಿ 12 ಕಿಲೋ ಮೀಟರ್ ದೂರದವರೆಗೆ ಕಾರ್ ಎಳೆದುಕೊಂಡು ಹೋಗಿದ್ದರ ಪರಿಣಾಮ ಸಾವನ್ನಪ್ಪಿದ ಯುವತಿ ಅಂಜಲಿ ಘಟನೆ ವೇಳೆ ಮದ್ಯಪಾನ ಮಾಡಿದ್ದಳೆಂಬುದು ಬಯಲಾಗಿದೆ.
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 20ರ ಹರೆಯದ ಯುವತಿ ಸ್ಕೂಟಿಗೆ ಕಾರ್ ಗೆ ಡಿಕ್ಕಿ ಹೊಡೆದು ಎಳೆದೊಯ್ದು ಕೊಂದ ಕಂಜಾವಾಲಾ ಘಟನೆಯ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಸಂತ್ರಸ್ತೆಯ ಎಫ್ ಎಸ್ ಎಲ್ ಪರೀಕ್ಷೆಯ ವರದಿಯನ್ನು ಸ್ವೀಕರಿಸಿದ್ದಾರೆ. ಘಟನೆಯ ವೇಳೆ ಸಂತ್ರಸ್ತೆ ಅಂಜಲಿ ಮದ್ಯದ ಅಮಲಿನಲ್ಲಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್) ಈ ಪರೀಕ್ಷೆಯನ್ನು ನಡೆಸಿದ್ದು, ಜನವರಿ 24 ರಂದು ಯುವತಿಯ ಒಳಾಂಗಗಳ ವರದಿಯನ್ನು ಸ್ವೀಕರಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ ವಲಯ II) ಸಾಗರ್ ಪ್ರೀತ್ ಹೂಡಾ ತಿಳಿಸಿದ್ದಾರೆ. ಈ ಪರೀಕ್ಷೆಯು ಪ್ರಕರಣದ ತನಿಖೆಯ ಭಾಗವಾಗಿದೆ ಎಂದು ಅವರು ಹೇಳಿದರು.
ಈ ಹಿಂದೆ ಅಂಜಲಿ ಸ್ನೇಹಿತೆ ನಿಧಿ ಕೂಡ ಘಟನೆಯ ಸಮಯದಲ್ಲಿ ತಾನು ಕುಡಿದಿದ್ದಾಗಿ ಹೇಳಿಕೊಂಡಿದ್ದಳು. ಆದಾಗ್ಯೂ, ಘಟನೆಯ ಸಮಯದಲ್ಲಿ ತನ್ನ ಮಗಳು ಕುಡಿದಿದ್ದಳು ಎಂಬ ಆಕೆಯ ಸ್ನೇಹಿತೆ ಹೇಳಿಕೆಯನ್ನು ಅಂಜಲಿಯ ಕುಟುಂಬವು ಬಲವಾಗಿ ತಳ್ಳಿಹಾಕಿತ್ತು.