ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವಂತೆ ಸರ್ಕಾರವನ್ನು ಕೋರಿತ್ತು.
ಇದಕ್ಕೆ ಸರ್ಕಾರ ಕೂಡ ಸಮ್ಮತಿಸಿದ್ದು, ಶುಕ್ರವಾರದಿಂದಲೇ ಇದು ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಿಯಾಯಿತಿ ಲಾಭ ಪಡೆಯಲು ಮುಂದಾಗಿರುವ ವಾಹನ ಸವಾರರು ದಂಡ ಪಾವತಿಗೆ ಮುಗಿಬಿದ್ದಿದ್ದು ಶುಕ್ರವಾರ ಒಂದೇ ದಿನ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆ ನಡುವೆ 2 ಲಕ್ಷ ಪ್ರಕರಣಗಳಲ್ಲಿ ಬರೋಬ್ಬರಿ 5.61 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ್ದಾರೆ.
ಪೊಲೀಸರ ಬಳಿ 89,699 ಪ್ರಕರಣಗಳಲ್ಲಿ 2,17,24,950 ರೂ. ದಂಡ ಸಂಗ್ರಹವಾಗಿದ್ದರೆ, ಪೇಟಿಎಂ ಆಪ್ ಮೂಲಕ 1,04,273 ಪ್ರಕರಣಗಳಲ್ಲಿ 89,650 ರೂಪಾಯಿ ದಂಡ ಸಂಗ್ರಹವಾಗಿದೆ. ಇನ್ನು ಸಂಚಾರ ನಿರ್ವಹಣಾ ಕೇಂದ್ರದ ಕೌಂಟರ್ ಗಳಲ್ಲಿ 540 ಪ್ರಕರಣಗಳ ಸಂಬಂಧ 89,650 ರೂಪಾಯಿ ಹಾಗೂ ಬೆಂಗಳೂರು ಒನ್ ಕೇಂದ್ರದ ಮುಖಾಂತರ 7,316 ಪ್ರಕರಣಗಳಲ್ಲಿ 16,21,600 ರೂಪಾಯಿ ದಂಡ ಸಂಗ್ರಹವಾಗಿದೆ.