ಬೆಂಗಳೂರು: ಅತ್ತೆ ಮಗಳೊಂದಿಗೆ ಚಾಟಿಂಗ್ ಮಾಡುತ್ತಿದ್ದ ಯುವಕನನ್ನು ಅಪಹರಿಸಿ ಕೊಲೆ ಮಾಡಿ ಚಾರ್ಮಾಡಿ ಘಾಟ್ ಗೆ ಶವ ಎಸೆದಿದ್ದ ನಾಲ್ವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮತ್ತಿಕೆರೆ ನಿವಾಸಿ 19 ವರ್ಷದ ಗೋವಿಂದರಾಜ್ ಮೃತಪಟ್ಟ ಯುವಕ. ಮತ್ತಿಕೆರೆಯ ರಿಯಲ್ ಎಸ್ಟೇಟ್ ಏಜೆಂಟರಾದ ಅನಿಲ್, ಆಂಧ್ರ ಹಳ್ಳಿಯ ಭರತ್, ಕಿಶೋರ್ ಹಾಗೂ ಲೋಹಿತ್ ಬಂಧಿತ ಆರೋಪಿಗಳು. ಜನವರಿ 30 ರಂದು ರಾತ್ರಿ ಗೋವಿಂದರಾಜ್ ನನ್ನು ಮನೆಯಿಂದ ಕರೆದೊಯ್ದು ಕೊಲೆ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ ಎಸೆದಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಡಿ. ದೇವರಾಜ್ ಹೇಳಿದ್ದಾರೆ.
ಮತ್ತಿಕೆರೆ ನಿವಾಸಿಯಾಗಿರುವ ಅನಿಲ್ ತನ್ನ ಅತ್ತೆ ಮಗಳನ್ನು ಮನೆಯಲ್ಲೇ ಸಾಕಿಕೊಂಡು ಓದಿಸುತ್ತಿದ್ದ. ಪಕ್ಕದ ರಸ್ತೆಯ ನಿವಾಸಿ ಪೈಂಟರ್ ಗೋವಿಂದರಾಜ್ ಮತ್ತು ಯುವತಿ ನಡುವೆ ಸ್ನೇಹ ಬೆಳೆದಿದ್ದು, ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡುತ್ತಿದ್ದರು. ಒಂದು ದಿನ ಕಾಲೇಜಿಗೆ ಯುವತಿ ತನ್ನ ಮೊಬೈಲ್ ಬಿಟ್ಟು ಹೋಗಿದ್ದು, ಇದೇ ವೇಳೆ ಗೋವಿಂದರಾಜ್ ಕರೆ ಮಾಡಿದ್ದಾನೆ. ಅನಿಲ್ ಕರೆ ಸ್ವೀಕರಿಸಿ ಮಾತನಾಡಿದ್ದಾನೆ. ವಾಟ್ಸಾಪ್ ಪರಿಶೀಲಿಸಿದಾಗ ಇಬ್ಬರ ನಡುವೆ ಅಶ್ಲೀಲ ಚಾಟಿಂಗ್ ನಡೆದಿರುವುದು ಮತ್ತು ಸಲುಗೆಯಿಂದಿರುವುದು ಗೊತ್ತಾಗಿದೆ.
ಇದರಿಂದ ಆಕ್ರೋಶಗೊಂಡ ಅನಿಲ್ ತನ್ನ ಸಂಬಂಧಿಕರಾದ ಭರತ್, ಕಿಶೋರ್ ಮತ್ತು ಲೋಹಿತ್ ಗೆ ವಿಷಯ ತಿಳಿಸಿದ್ದಾನೆ. ಎಲ್ಲರೂ ಸೇರಿಕೊಂಡು ಜನವರಿ 30 ರಂದು ರಾತ್ರಿ 10 ಗಂಟೆಗೆ ಪಕ್ಕದ ರಸ್ತೆಯಲ್ಲಿದ್ದ ಗೋವಿಂದರಾಜು ಮನೆಗೆ ಹೋಗಿ ಮಾತನಾಡಬೇಕಿದೆ ಎಂದು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಆಂಧ್ರಹಳ್ಳಿಯಲ್ಲಿರುವ ಭರತ್ ಗೆ ಸೇರಿದ ಶೆಡ್ ನಲ್ಲಿ ಕೂಡಿಹಾಕಿ ಪ್ರಶ್ನಿಸಿದಾಗ ಪ್ರೀತಿಸುತ್ತಿರುವುದಾಗಿ ಗೋವಿಂದರಾಜ್ ತಿಳಿಸಿದ್ದಾನೆ. ದೊಣ್ಣೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದು ಗೋವಿಂದರಾಜು ಮೃತಪಟ್ಟಿದ್ದಾನೆ. ಬಳಿಕ ಆತನ ಶವವನ್ನು ಕಾರಿನಲ್ಲಿ ಚಾರ್ಮಾಡಿ ಘಾಟ್ ಗೆ ತೆಗೆದುಕೊಂಡು ಹೋಗಿ ಎಸೆದು ಬಂದಿದ್ದಾರೆ. ಪೊಲೀಸ್ ಸಹಾಯವಾಣಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಯಶವಂತಪುರ ಠಾಣೆ ಪೊಲೀಸರು ಇದನ್ನು ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.