ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಯ ಪರ್ವ. ಮನೆ ಮತ್ತು ಶಾಲೆ ಎರಡೂ ಕಡೆ ಸಾಕಷ್ಟು ಒತ್ತಡವನ್ನು ವಿದ್ಯಾರ್ಥಿಗಳು ಅನುಭವಿಸುತ್ತಾ ಇರುತ್ತಾರೆ. ಮನೆಯಲ್ಲೇ ಕೂತು ಪರೀಕ್ಷೆಗೆ ತಯಾರಾಗುವಾಗ ಈ ತಪ್ಪುಗಳನ್ನು ಖಂಡಿತಾ ಮಾಡಬೇಡಿ.
ಈಗಾಗಲೇ ಸಾಕಷ್ಟು ಒತ್ತಡದಲ್ಲಿ ಓದುತ್ತಾ ಇರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಆಗ್ಗಾಗ್ಗೆ ಕರೆ ಮಾಡಿ ಅವರ ವಿದ್ಯಾಭ್ಯಾಸ, ಪರೀಕ್ಷೆಯ ತಯಾರಿಯ ಬಗ್ಗೆ ಚರ್ಚೆ ಮಾಡದೇ ಇರುವುದು ಒಳ್ಳೆಯದು. ಒಂದು ವೇಳೆ ನಿಮ್ಮ ಸ್ನೇಹಿತರು ನಿಮಗಿಂತ ಹೆಚ್ಚು ಚೆನ್ನಾಗಿ ತಯಾರಿ ನಡೆಸಿದ್ದಾರೆ ಎಂದು ನಿಮಗೆ ಗೊತ್ತಾದರೆ, ಅನವಶ್ಯಕವಾಗಿ ಆತಂಕಕ್ಕೆ ಒಳಗಾಗಬಹುದು.
ನಾನು ಇನ್ನೂ ಸಾಕಷ್ಟು ಓದುವುದು ಬಾಕಿ ಇದೆ ಎಂಬ ಭಯ ಆವರಿಸಬಹದು. ಇದು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಲು ನೇರ ಕಾರಣವಾಗುತ್ತದೆ. ಇದೇ ಆತಂಕದಲ್ಲಿ ಆತ್ಮವಿಶ್ವಾಸ ಕಡಿಮೆ ಇರುವ ವಿದ್ಯಾರ್ಥಿಗಳು ಓದಿದ್ದೆಲ್ಲಾ ಮರೆತು ಹೋಗಬಹುದು.
ಒಂದು ವೇಳೆ ನೀವು ಅತ್ಯುತ್ತಮವಾಗಿ ಓದುವ ವಿದ್ಯಾರ್ಥಿ ಆದರೂ ನಿಮ್ಮ ಸ್ನೇಹಿತರ ಪರೀಕ್ಷಾ ತಯಾರಿಯ ಬಗ್ಗೆ ತಿಳಿಯುವ ಉತ್ಸಾಹ ತೋರದೆ ಇರುವುದೇ ಒಳ್ಳೆಯದು. ಯಾಕೆಂದರೆ ನಿಮಗಿಂತ ನಿಮ್ಮ ಸ್ನೇಹಿತರು ಹೆಚ್ಚು ತಯಾರಿ ಮಾಡಿಕೊಂಡಿಲ್ಲ ಎಂಬುದು ನಿಮಗೆ ಗೊತ್ತಾದಾಗ ನಿಮ್ಮಲ್ಲಿ ಅತಿಯಾದ ಆತ್ಮವಿಶ್ವಾಸ ಮೂಡಿ ಆಗಲೂ ಹಿನ್ನಡೆಯಾಗಬಹುದು.