ಪಲೋಲೊ: ರಾತ್ರಿ ಮಲಗಿರುವಾಗ ದೊಡ್ಡ ಬಂಡೆಯೊಂದು ಬಂದು ನೀವು ಮಲಗಿರುವ ಮಂಚಕ್ಕೆ ಅಪ್ಪಳಿಸಿದರೆ ಹೇಗಿರುತ್ತದೆ? ಊಹಿಸಿಕೊಳ್ಳಲೂ ಭಯವಾಗುತ್ತದೆ ಅಲ್ಲವೇ? ಆದರೆ ಅಂಥದ್ದೇ ಒಂದು ಘಟನೆ ಪಲೋಲೋ ಕಣಿವೆಯಲ್ಲಿ ನಡೆದಿದೆ.
ಇಲ್ಲಿ ಸಸಾಕಿ ಕುಟುಂಬಸ್ಥರು ವಾಸವಾಗಿರುವ ಮನೆಯೊಳಗೆ ಜನವರಿ 28 ರ ರಾತ್ರಿ ಬೃಹತ್ ಬಂಡೆಯೊಂದು ಅಪ್ಪಳಿಸಿದೆ. ಬಂಡೆ ಅಪ್ಪಳಿಸಿದ ವೇಗಕ್ಕೆ ಗೋಡೆ ಕುಸಿದು ಹೋಗಿದೆ. ಅಲ್ಲಿಯೇ ಮಂಚದ ಮೇಲೆ ಮಲಗಿದ್ದ ಕ್ಯಾರೋಲಿನ್ ಸಸಾಕಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ.
ಇದರ ಭಯಾನಕ ವಿಡಿಯೋ ವೈರಲ್ ಆಗಿದೆ. ರಾತ್ರಿಯ ವೇಳೆ ಬಂಡೆ ಅಪ್ಪಳಿಸಿದ ರಭಸಕ್ಕೆ ಮನೆಯ ಸಿಂಡರ್ ಬ್ಲಾಕ್ ಗೋಡೆ ಮತ್ತು ಲಿವಿಂಗ್ ರೂಮ್ ಪುಡಿಯಾಗಿ ಮಲಗುವ ಕೋಣೆಯೊಳಕ್ಕೆ ನುಗ್ಗಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಬಂಡೆ ಕ್ಯಾರೋಲಿನ್ ಅವರ ಮಲಗಿದ್ದ ಮಂಚದ ಸಮೀಪ ಅಪ್ಪಳಿಸಿದೆ. ಶಬ್ದಕ್ಕೆ ಬೆದರಿ ಅವರು ಅಲ್ಲಿಂದ ಓಡಿ ಹೋದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
“ಅಬ್ಬರದ ಶಬ್ದ ಹೊರತುಪಡಿಸಿ ಏನಾಯಿತು ಎಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ” ಎಂದು ಕ್ಯಾರೋಲಿನ್ ಹೇಳಿದ್ದಾರೆ. ಬಂಡೆಯು ಸುಮಾರು 5 ಅಡಿ ಎತ್ತರ ಮತ್ತು ಅಗಲವಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಇದೇ ಮೊದಲ ಬಾರಿಗೆ ಈ ರೀತಿ ಘಟನೆ ಸಂಭವಿಸಿರುವುದು ಎನ್ನಲಾಗಿದೆ.