ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಅದಾನಿ ಸಮೂಹದ ಕುರಿತು ಬಿಡುಗಡೆ ಮಾಡಿರುವ ವರದಿ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅದಾನಿ ಕಂಪನಿಗಳ ಶೇರುಗಳ ಮೌಲ್ಯದಲ್ಲಿ ತೀವ್ರ ಕುಸಿತ ಕಂಡ ಪರಿಣಾಮ ಗೌತಮ್ ಅದಾನಿ ಅವರ ಸಂಪತ್ತಿನಲ್ಲೂ ಭಾರಿ ಇಳಿಕೆಯಾಗಿತ್ತು.
ವಿಶ್ವ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ತಮ್ಮ ಕಂಪನಿಗಳ ಷೇರುಗಳ ಬೆಲೆಯಲ್ಲಿ ಕುಸಿತ ಕಂಡ ಪರಿಣಾಮ ಸಂಪತ್ತಿನ ಇಳಿಕೆಯೊಂದಿಗೆ ವಿಶ್ವ ಸಿರಿವಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಪಟ್ಟಿಯಲ್ಲಿ ಭಾರತದವರೇ ಆದ ಮುಖೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದಾರೆ.
ಭಾರತದ ಅತಿ ಸಿರಿವಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಈಗಲೂ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು, ಆದರೆ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರಿಗೆ ಸಂಪತ್ತಿನಲ್ಲಿ 18,000 ಕೋಟಿ ರೂಪಾಯಿ ವ್ಯತ್ಯಾಸವಷ್ಟೇ ಉಳಿದಿದೆ. ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ಇದೇ ರೀತಿಯ ಕುಸಿತ ಕಂಡರೆ ಗೌತಮ್ ಅದಾನಿ ಅವರ ಸಂಪತ್ತಿನಲ್ಲೂ ಇಳಿಕೆಯಾಗಲಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಮತ್ತೆ ಭಾರತದ ನಂಬರ್ 1 ಶ್ರೀಮಂತರಾಗುವ ಸಾಧ್ಯತೆ ಇದೆ.